ರಾಜಕೀಯ

ಜೆಡಿಎಸ್‌ ಮೊದಲಿ‌ನಿಂದಲೂ ಹೊಂದಾಣಿಕೆ ಪಕ್ಷ: ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

Vishwanath S

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಆರೋಪಿಯನ್ನಾಗಿ ಮಾಡಿದ್ದಾರೆ. ಆದರೆ ಸಾಬೀತು ಮಾಡುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾವು ಯಾರನ್ನೂ ಬೆಂಬಲಿಸುವುದಾಗಲೀ, ಅವರ ಪರ ವಕಾಲತ್ತು ವಹಿಸುವುದಾಗಲೀ ಮಾಡುವುದಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಚಾರ್ಜ್ ಶೀಟ್ ಹಾಕಿದ ತಕ್ಷಣ ಅಪರಾಧಿ ಆಗುವುದಿಲ್ಲ. ಸಂಪತ್ ರಾಜ್ ಆರೋಪಿ ಅಷ್ಟೆ. ಅವರ ಮೇಲಿನ ಆರೋಪಗಳು ಸಾಬೀತಾಗುವರೆಗೆ ಆರೋಪಿ, ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲಿ, ಅದನ್ನು ಸಾಬೀತು ಮಾಡುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು.

ತಾವು ಎರಡು ಬಾರಿ ಸರ್ಕಾರಕ್ಕೆ ಪತ್ರ ಬರೆದು, ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ-ಕಾಲೇಜು ತೆರೆಯದಂತೆ ಸಲಹೆ ನೀಡಿದ್ದೆ, ಮಕ್ಕಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಹಾಕಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಾಲೇಜು ತೆರೆಯಬಾರದು ಎಂದು ಹೇಳಿದ್ದೆ. ಆದರೆ ಕಾಲೇಜು ತೆಗೆದಿದ್ದಾರೆ. ಈಗ ಮಕ್ಕಳಿಗೆ ಮೇಲಿಂದ ಮೇಲೆ ಪರೀಕ್ಷೆ ಮಾಡುತ್ತಲೇ ಇರಬೇಕು. ಮಕ್ಕಳಿಗೆ ಉಚಿತ ಪರೀಕ್ಷೆ ಮಾಡಬೇಕು. ಹಾಜರಿ ಕಡ್ಡಾಯಗೊಳಿಸಬಾರದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೋ ಗೊತ್ತಿಲ್ಲ. ಖಾಸಗಿಯವರು ಸಂಬಳ ಕೊಡಬೇಕು. ಶುಲ್ಕಕ್ಕಾಗಿ ಖಾಸಗಿಯವರು ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ ಎಂದರು.

ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ಹೊಂದಾಣಿಕೆ ವಿಚಾರವಾಗಿ ಜೆಡಿಎಸ್ ಮೇಲೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಜೆಡಿಎಸ್‌ನವವರು ಮೊದಲಿ‌ನಿಂದಲೂ ಹೊಂದಾಣಿಕೆ ಮಾಡಿಕೊಂಡು ಬಂದವರು. ಅಧಿಕಾರ‌ ಎಲ್ಲಿ ಇರುತ್ತದೆಯೋ ಅಲ್ಲಿ ಅವರು ಇರುತ್ತಾರೆ. ಅವಕಾಶವಾದಿ ರಾಜಕೀಯವನ್ನು ಜೆಡಿಎಸ್ ಮಾಡುತ್ತದೆ. ಅದಕ್ಕೆ ಕಳೆದ ಬಾರಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಬಿ ಟೀಂ ಎಂದು ಕರೆದಿದ್ದೆ ಎಂದರು.

ಮರಾಠ ಪ್ರಾಧಿಕಾರ ‌ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,ಎಲ್ಲರಿಗೂ ಸಾಮಾಜಿಕ‌ ನ್ಯಾಯ ಕೊಡಬೇಕು. ಇದೊಂದು ಪಕ್ಕಾ ‌ಓಲೈಕೆ ರಾಜಕಾರಣ. ಬಸವಕಲ್ಯಾಣ ‌ಚುನಾವಣೆಯ ದೃಷ್ಟಿಯಿಂದ ‌ಈ ಕೆಲಸ ಮಾಡಿದ್ದಾರೆ ಎಂದು ಸಿದ್ದಾರಾಮಯ್ಯ ಹೇಳಿದರು.

SCROLL FOR NEXT