ರಾಜಕೀಯ

ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ ಎಷ್ಟರಮಟ್ಟಿಗಿದೆ: ಡಿಕೆ ಶಿವಕುಮಾರ್

Shilpa D

ಕಲಬುರಗಿ: ನನ್ನ ಮಗಳ ನಿಶ್ಚಿತಾರ್ಥದ ದಿನವೇ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಉಕ್ಕಿ ಹರಿಯುತ್ತಿದೆ. ನನಗೆ ತೊಂದರೆ ಕೊಟ್ಟವರು ಯಾವಾಗಲೂ ಖುಷಿಯಾಗಿರಲಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ‌ವ್ಯಂಗ್ಯವಾಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು  ಯಾರ ಮೇಲೂ ಮಾಡದೆ ನನ್ನೊಬ್ಬನನ್ನು ಯಾಕೆ ಟಾರ್ಗೆಟ್ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತೆ ಎಂದು ಸಿಬಿಐ ದಾಳಿ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗಳ ನಿಶ್ಚಿತಾರ್ಥದ ದಿನವೇ ನನಗೆ ಸಿಬಿಐ ನೋಟೀಸ್ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಶಾಸಕರಿಗೂ ನೋಟೀಸ್ ನೀಡಿಲ್ಲ. ಆದ್ರೆ ನನಗೆ ಮಾತ್ರ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದ್ವೇಷದ ರಾಜಕಾರಣ ವ್ಯಾಪಕವಾಗಿದೆ. ಯಾರ ಮೇಲೂ ಮಾಡದೆ ನನ್ನೊಬ್ಬನಿಗೆ ಯಾಕೆ ಮಾಡ್ತಿದಾರೆ. ನನಗೆ ತೊಂದರೆ ಕೊಟ್ಟರೆ ಕೊಟ್ಟರೆ ಅವರಿಗೆ ಖುಷಿಯಾಗುತ್ತದೆ ಎಂದಾದರೆ ಖುಷಿಯಾಗಲಿ. ಅವರಾದ್ರೂ ಖುಷಿಯಾಗಿರಲಿ. ನನ್ನ ವಿರುದ್ಧ ಎಫ್.ಐ.ಆರ್. ಹಾಕೋ ಜೊತೆಗೆ ನೋಟೀಸ್ ಸಹ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಆರೋಪಿಸಿದ್ದಾರೆ.

ರಾಜಕೀಯ ಕುಮ್ಮಕ್ಕು ಇಲ್ಲದಿದ್ದಲ್ಲಿ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದ್ರೆ ಸಿಬಿಐ ಅಧಿಕಾರಿಗಳು ನ್ಯಾಯ ಸಮ್ಮತ ತನಿಖೆ ನಡೆಸಲಿ. ನಾನು ಕಾನೂನಿಗೆ ಗೌರವ ಕೊಡ್ತೇನೆ. ಸಿಬಿಐ ಕಛೇರಿಗೆ ವಿಚಾರಣೆಗೆ ಹಾಜರಾಗುತ್ತೇನೆ. ಯಾರೂ ಸಹ ಗಾಬರಿಪಟ್ಟುಕೊಳ್ಳಬೇಡಿ, ಸಿಬಿಐ ಕಛೇರಿ ಕಡೆ ಬರಬೇಡಿ. ನನ್ನ ಪರವಾದ ಹೇಳಿಕೆಗಳನ್ನೂ ನೀಡಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಡಿಕೆಶಿ ಮನವಿ ಮಾಡಿದ್ದಾರೆ.

SCROLL FOR NEXT