ರಾಜಕೀಯ

ಸಂಪುಟ ವಿಸ್ತರಣೆ ಕಸರತ್ತು: ಸಿ.ಟಿ ರವಿ ಕಚೇರಿ ಉದ್ಘಾಟನೆ ನೆಪದಲ್ಲಿ ದೆಹಲಿಗೆ ಸಚಿವರ ದೌಡು!

Shilpa D

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶುಕ್ರವಾರ ಕರೆದಿರುವ ಸಚಿವ ಸಂಪುಟ ಸಭೆಯಲ್ಲಿ ಹಲವು ಸಚಿವರು ಗೈರಾಗುವ ಸಾಧ್ಯತೆಯಿದೆ. 

ಶುಕ್ರವಾರ ಮಧ್ಯಾಹ್ನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿ.ಟಿ ರವಿ ಅವರ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಹಲವು ಸಚಿವರು ತೆರಳಿದ್ದಾರೆ.

ಕಂದಾಯ ಸಚಿವ ಆರ್,ಅಶೋಕ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರುಗಳಾಗ ರಮೇಶ್ ಜಾರಕಿಹೊಳಿ, ಕೆಎಸ್ ಈಶ್ವರಪ್ಪ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ದೆಹಲಿಯಲ್ಲಿ ಮಧ್ಯಾಹ್ನ 12ಕ್ಕೆ ಕಚೇರಿ ಉದ್ಘಾಟನೆ ಕಾರ್ಯಕ್ರಮವಿದ್ದು, ಬೆಂಗಳೂರಿನಲ್ಲಿ ಬೆಳಗ್ಗೆ 10.30ಕ್ಕೆಸಚಿವ ಸಂಪುಟ ಸಭೆ ನಡೆಯಲಿದೆ.

ಕೇಂದ್ರದ ನಾಯಕರನ್ನು ಭೇಟಿ ಮಾಡಿ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಹಲವು ಸಚಿವರು ದೆಹಲಿಗೆ ತೆರಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಕಚೇರಿ ಉದ್ಘಾಟನೆ ಕೇವಲ ನೆಪವಷ್ಟೆ ಎನ್ನಲಾಗಿದೆ.

ಶಾಸಕ ಶಿವನಗೌಡ ನಾಯ್ಕ್, ಎಂಎಲ್ ಸಿ ಪುಟ್ಟಣ್ಣ ದೆಹಲಿಗೆ ತೆರಳಿದ್ದಾರೆ, ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನಾರಚನೆಗಾಗಿ ಸಿಎಂ ಯಡಿಯೂರಪ್ಪ ಕೇಂದ್ರ ನಾಯಕರ ಅನುಮೋದನೆಗಾಗಿ ಕಾಯುತ್ತಿರುವ ಬೆನ್ನಲ್ಲೆ ಸಚಿವರ ದೆಹಲಿ ಭೇಟಿ ಮಹತ್ವ ಪಡೆದಿದೆ.

ಕಳೆದ ವಾರ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಅನುಮೋದನೆ ಕೇಳಿದ್ದರು. ಇತ್ತೀಚೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡ ಬೆಂಗಳೂರಿಗೆ ಆಗಮಿಸಿ ಸಿಎಂ ಜೊತೆ ಚರ್ಚಿಸಿದ್ದರು.

ಸಿಎಂ ದೆಹಲಿಯಿಂದ ವಾಪಸ್ ಬಂದ ನಂತರ ಹಲವು ರಾಜ್ಯ ನಾಯಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿದ್ದರು,  ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. 

SCROLL FOR NEXT