ರಾಜಕೀಯ

ಉಪ ಚುನಾವಣಾ ಸೋಲಿನ ಆತ್ಮಾವಲೋಕನ, ಮುಂಬರುವ ಚುನಾವಣೆಗಳ ಬಗ್ಗೆ ಕಾಂಗ್ರೆಸ್ ನಾಯಕರ ಚರ್ಚೆ

Manjula VN

ಬೆಂಗಳೂರು: ಪ್ರಸ್ತುತ ರಾಜಕೀಯ ವಿದ್ಯಾಮಾನ, ವಿಧಾನಮಂಡಲ ಅಧಿವೇಶನ, ಉಪ ಚುನಾವಣೆ ಸೋಲಿನ ಪರಾಮರ್ಶೆ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಸಭೆಯನ್ನು ಸೋಮವಾರ ಖಾಸಗಿ ಹೊಟೇಲಿನಲ್ಲಿ ಕರೆಯಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಸಭೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕದ ‌ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್‌.ಆರ್.ಪಾಟೀಲ್, ರಾಜ್ಯಸಭಾ ‌ಸದಸ್ಯ ಮತ್ತು ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ್ ಖರ್ಗೆ,ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಮತ್ತು ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.

ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಸೋಲು ಕಂಡಿರುವ ಕುರಿತು ಈಗಾಗಲೇ ಡಿಕೆ.ಶಿವಕುಮಾರ್ ಅವರು ಪಕ್ಷದ ಹಲವು ನಾಯಕರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದು, ಮುಂದಿನ ಚುನಾವಣೆಗಳಲ್ಲಿ ಪಕ್ಷ ಗೆಲುವಿನ ಹಾದಿ ಹಿಡಿಯುವುದು ಹೇಗೆ ಎಂಬುದರ ಕುರಿತು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಮತ್ತೆ ಪಕ್ಷದ ಪ್ರಮುಖ ನಾಯಕರೊಂಡಿದೆ ಸಭೆ ನಡೆಸುತ್ತಿದ್ದು, ಸೋಲಿನ ಕುರಿತು ಪರಾಮರ್ಶೆ ನಡೆಸಲಿದ್ದಾರೆ. 

ಸಭೆ ವೇಳೆ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲು ನೀಡಲು ಮುಂದಾಗಿರುವ ನಿರ್ಧಾರ ಕುರಿತಂತೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ. 

ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲು ನೀಡುತ್ತಿರುವ ಕುರಿತು ಹಲವು ತಜ್ಞರು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದು, ನಿಜವಾಗಿಯೂ ಹಿಂದುಳಿದ ಜನರಿಗೆ ಇದು ಭಾರೀ ಹೊಡೆತವನ್ನು ನೀಡಲಿದೆ ಎಂದು ಹೇಳಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ನಡೆಸಲಿದ್ದು, ಸರ್ಕಾರದ ನಿರ್ಧಾರಕ್ಕೆ ದಿಟ್ಟ ಉತ್ತರ ನೀಡಲು ಮುಂದಾಗಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. 

ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಬರುವ ದಿನಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಎದುರಾಗಿರುವ ಸವಾಲುಗಳನ್ನು ಬಳಕೆ ಮಾಡಿಕೊಳ್ಳುವ ತರಾತುರಿಯಲ್ಲಿದೆ.

ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಕುರಿತಂತೆಯೂ ಇಂದು ಚರ್ಚೆ ನಡೆಯಲಿದ್ದು, ಗ್ರಾಮಪಂಚಾಯತಿ ಚುನಾವಣೆಯಿಂದಲೇ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಿದೆ. ಡಿ.7ರಿಂದ ಆರಂಭವಾಗುವ ವಿಧಾನಸಬೆ ಅಧಿವೇಶನ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. 

SCROLL FOR NEXT