ರಾಜಕೀಯ

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

Lingaraj Badiger

ಬೆಂಗಳೂರು: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದ ತೀರ್ಪಿನ ಕುರಿತು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1992ರ ಡಿಸೆಂಬರ್ 6ರಂದು ನಡೆದ ಘಟನೆಯನ್ನು ಜನರು ಕಣ್ಣಾರೆ ನೋಡಿದ್ದರೂ, ಸಾಕ್ಷ್ಯಾಧಾರ ಕೊರತೆಯಿಂದಾಗಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೇಸರವಾಗಿದೆ ಎಂದರು.

ಲಕ್ಷಾಂತರ ಜನ ಸಾಕ್ಷಿಯಾಗಿದ್ದ ಈ ಘಟನೆ ಕುರಿತು ಇಂತಹ ತೀರ್ಪು ನೀಡಿರುವುದು ಸರಿಯಲ್ಲ. ಇದು ನ್ಯಾಯಾಂಗದಲ್ಲಿ ಜನರು ಇರಿಸಿರುವ ನಂಬಿಕೆ ಕಡಿಮೆಯಾಗುವುದಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಬಿಜೆಪಿಯವರೇ ಇದಕ್ಕೆ ಕುಮ್ಮಕ್ಕು‌ಕೊಟ್ಟಿದ್ದು ಹೋಗಲಿ ಕರಸೇವಕರು ಎಲ್ಲಿಂದ ಬಂದರು? ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು? ಕರಸೇವಕರು ಅಲ್ಲಿ ಏಕಾಏಕಿ‌ ಹೋಗೋಕೆ ಸಾಧ್ಯವೇ? ಅದಕ್ಕೆ ಯಾರದಾದರೂ ಸಾಥ್ ಬೇಕಲ್ಲವೇ? ಹಾಗಾದರೆ ಬಾಬರಿ ಮಸೀದಿ ಹೊಡೆದಿದ್ದು ಯಾರು? ಬಾಬರಿ ಮಸೀದಿ ಬಳಿ ಕರಸೇವಕರನ್ನ ಕರೆದೊಯ್ದಿದ್ದು ಹೇಗೆ? ಕಲ್ಯಾಣ್ ಸಿಂಗ್ ಆಗ ಸಿಎಂ ಆಗಿದ್ದರು. ಕರಸೇವಕರು ಗಲಾಟೆ ಮಾಡುತ್ತಾರೆ ಅಂತ ಹೇಳಿದ್ದರು. ಒಬ್ಬ ಮುಖ್ಯಮಂತ್ರಿಯೇ ಹೀಗೆ ಹೇಳಿದರೆ ಹೇಗೆ? ಇದಕ್ಕಾಗಿಯೇ ಕರಸೇವಕರು ಅಲ್ಲಿಗೆ ಹೋಗೋಕೆ ಸಾಧ್ಯವಾಯ್ತು. ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ಹೈಕೋರ್ಟ್ ಗೆ ಹೋಗ್ತಾರೆ. ತೀರ್ಪಿನ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತಾರೆ. ಕಣ್ಣೆದುರೇ ಕಂಡ ದೃಶ್ಯಗಳನ್ನ ಸಾಕ್ಷ್ಯಗಳಾಗಿ ಪರಿಗಣಿಸಿಲ್ಲ. ಮುಂದೆ ಕೋರ್ಟ್ ತೀರ್ಪುಗಳು ಹೇಗೆ ಬರುತ್ತವೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

SCROLL FOR NEXT