ರಾಜಕೀಯ

ರಾಜರಾಜೇಶ್ವರಿ ನಗರ ಉಪಚುನಾವಣೆ: ಇನ್ನೂ ಅಂತಿಮಗೊಳ್ಳದ ಬಿಜೆಪಿ ಅಭ್ಯರ್ಥಿ; ಸಿಎಂ ಭೇಟಿಯಾದ ಜಾರಕಿಹೊಳಿ, ಮುನಿರತ್ನ

Manjula VN

ಬೆಂಗಳೂರು: ಉಪಚುನಾವಣೆ ಕದನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಆಡಳಿತಾರೂಢ ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. 

ಉಪಚುನಾವಣೆಗೆ ಇನ್ನೂ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜೊತೆಗೂಡಿದ ಮುನಿರತ್ನ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ಪಕ್ಷದ ರಾಜ್ಯ ನಾಯಕರ ಪೈಕಿ ಬಹುತೇಕರು ಕಾಂಗ್ರೆಸ್ ತೊರೆದು ಬಂದಿರುವ ಮುನಿರತ್ನ ಅವರಿಗೆ ಟಿಕೆಟ್ ನೀಡಬೇಕೆಂದು ವಾದ ಮಂಡಿಸುತ್ತಿದ್ದಾರೆ. ಕೇಂದ್ರ ನಾಯಕರ ಪೈಕಿ ಹಲವರು ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿದ್ದ ಪಿ.ಮುನಿರಾಜು ಗೌಡ ಅವರನ್ನು ಅಭ್ಯರ್ಥಿಯನ್ನಾಗಿಸುವ ಬಗ್ಗೆ ಒಲವು ತೋರುತ್ತಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಅಂತಿಮವಾಗಿ ಟಿಕೆಟ್ ಯಾರ ಪಾಲಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. 

ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಯನ್ನು ಘೋಷಿಸಿ ಕ್ಷೇತ್ರದ ಮಟ್ಟದ ಮುಖಂಡರ ಸಭೆಯನ್ನೂ ಬುದವಾರದಿಂದಲೇ ಆರಂಭಿಸಿದೆ. ಇನ್ನು ಜೆಡಿಎಸ್ ಗುರುವಾರ ತನ್ನ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಭೆ ನಡೆಸುವ ಸಾಧ್ಯತೆಗಳಿವೆ. ಈಗಾಗಲೇ ಮೂವರನ್ನು ಅಂತಿಮಗೊಳಿಸಿದ್ದರೂ ಬಿಜೆಪಿ ಅಭ್ಯರ್ಥಿ ಪ್ರಕಟಿಸಿದ ನಂತರವೇ ತನ್ನ ಅಭ್ಯರ್ಥಿಯನ್ನು ಘೋಷಿಸುವ ಸಂಭವ ಹೆಚ್ಚಾಗಿದೆ. 

ಸದ್ಯದ ಪರಿಸ್ಥಿತಿಯಲ್ಲಿ ಮುನಿರತ್ನ ಅವರಿಗೆ ಟಿಕೆಟ್ ನೀಡದಿದ್ದರೆ ಅದು ಸರ್ಕಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ. ಮುನಿರತ್ನ ಅವರೇ ಸ್ಪರ್ಧಿಸುವುದಿಲ್ಲ ಎಂದರೆ ಸರಿ, ಇಲ್ಲದಿದ್ದರೆ ಪಕ್ಷದಿಂದಲೇ ಬಲವಂತದ ನಿರಾಕರಣೆ ಮಾಡಿದರೆ, ಅದು ಮುಂದಿನ ದಿನಗಳಲ್ಲಿ ಅನ್ಯ ಪಕ್ಷಗಳಿಂದ ವಲರೆ ಬರಬೇಕು ಎಂದುಕೊಂಡವರು ಹಿಂಜರಿಯಬಹುದು. ಹೀಗಾಗಿ ಮುನಿರತ್ನ ಅವರಿಗೆ ಟಿಕೆಟ್ ನೀಡುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ. ಹೀಗಾಗಿ ಕೊನೆಯ ಹಂತದಲ್ಲಿ ಟಿಕೆಟ್ ಯಾರಿಗೆ ಘೋಷಣೆಯಾಗಬಹುದು ಎಂಬುದು ಬಿಜೆಪಿಯಲ್ಲಿಯೇ ಕುತೂಹಲ ಮೂಡಿಸಿದೆ. 

SCROLL FOR NEXT