ರಾಜಕೀಯ

ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ಪಕ್ಷ ಸಂಘಟನೆ ಹೊಣೆ ಸಿಟಿ ರವಿ ಹೆಗಲಿಗೆ

Shilpa D

ಬೆಂಗಳೂರು: ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಸಂಘಟನೆಯ ಉಸ್ತುವಾರಿಯನ್ನು ಹೊಸದಾಗಿ ನೇಮಕವಾಗಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಹೆಗಲಿಗೆ ನೀಡಲಾಗಿದೆ. ಆದರೆ ಈ ಸಂಬಂಧ ಪಕ್ಷ ಇದುವರೆಗೂ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ, ಎಲ್ಲಾ ರಾಜ್ಯಗಳಿಗೂ ಉಸ್ತುವಾರಿ ನೇಮಿಸುವವರೆಗೂ ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿದೆ.

ಈ ಮೊದಲು ಮುರುಳಿಧರ ರಾವ್ ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿದ್ದರು. ಕಳೆದ ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೊಸ ತಂಡವನ್ನು ಪ್ರಕಟಿಸಿತ್ತು, ಅದರಲ್ಲಿ ಸಿಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿತು. ಹೊಸ ಪದಾದಿಕಾರಿಗಳ ನೇಮಕದ ಬೆನ್ನಲ್ಲೇ ಸಿಟಿ ರವಿ ನವದೆಹಲಿಯನ್ನು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂದಿನ ವ್ಯವಸ್ಥೆ ಆಗುವವರೆಗೂ ದಕ್ಷಿಣ ರಾಜ್ಯಗಳ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುವಂತೆ ಸಿಟಿ ರವಿ ಅವರಿಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾನು ಬಿಜೆಪಿ ಬಾವುಟಗಳನ್ನು ಕಟ್ಟುವ ಮೂಲಕ ಪಕ್ಷದ ಕಾರ್ಯಕರ್ತನಾಗಿ ಕೆಲಸ ಆರಂಭಿಸಿದೆ,ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನನ್ನನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ ಎಂದು ಸಿಟಿ ರವಿ ಟ್ವೀಟ್ ಮಾಡಿದ್ದರು. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ, ನಮ್ಮದು ಕೇಡರ್ ಆಧರಿತ ಸಂಘಟನೆ, ನನ್ನ ಕೈಲಾದಷ್ಟು ನನ್ನ ಪಕ್ಷಕ್ಕಾಗಿ ಉತ್ತಮ ಕೆಲಸ ಮಾಡುವುದಾಗಿ ತಿಳಿಸಿದ್ದರು.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ರವಿ ತಾವು ನಿರ್ವಹಿಸುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.  ಆದರೆ ಸದ್ಯ ರವಿ ರಾಜಿನಾಮೆ ಇನ್ನೂ ಅಂಗೀಕಾರವಾಗಿಲ್ಲ.

SCROLL FOR NEXT