ರಾಜಕೀಯ

ಅಮರನಾಥ್ ಜಾರಕಿಹೊಳಿಗೆ ಬೆಳಗಾವಿ ಬೈ ಎಲೆಕ್ಷನ್ ಟಿಕೆಟ್: ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್

Shilpa D

ಬೆಳಗಾವಿ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಟಿಕೆಟ್ ಗಾಗಿ ಲಾಬಿ ಆರಂಭವಾಗಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಸದ್ಯಕ್ಕೆ ಬಿಜೆಪಿ ಕಠಿಣ ಸವಾಲಾಗಿದೆ.

ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್ ಅವರಿಗೆ ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್ ಟಿಕೆಟ್ ಎಂಬ ಸುದ್ದಿ  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಬೆಳಗಾವಿ ಲೋಕಸಭೆ ವ್ಯಾಪ್ತಿಗೆ ಬರುವ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಜಾರಕಿ ಹೊಳಿ ಕುಟುಂಬಕ್ಕೆ ವ್ಯಾಪಕ ಬೆಂಬಲವಿದೆ, ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಜಾರಕಿ ಹೊಳಿ ಸಹೋದರರು ಶಾಸಕರಾಗಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ತಮ್ಮ ಪುತ್ರನನ್ನು ಕಣಕ್ಕಿಳಿಸಬೇಕೆಂದು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಂಸದ ರಮೇಶ್ ಕತ್ತಿ, ಶಂಕರಗೌಡ ಪಾಟೀಲ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ, ಆದರೆ ಗೆಲುವಿನ ದೃಷ್ಟಿಯಿಂದ ಬಿಜೆಪಿ ಅಮರ್ ನಾಥ್ ಅಭ್ಯರ್ಥಿಯಾಗುವುದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಮರಾಠಿ ಪ್ರಾಬಲ್ಯವಿರುವ ಕ್ಷೇತ್ರಗಳ್ಲಿ ಜಾರಕಿಹೊಳಿಗೆ ಅಪಾರ ಬೆಂಬಲವಿದೆ, ಜೊತೆಗೆ ಮಹಾರಾಷ್ಠ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ ಜಾರಕಿಹೊಳಿ ಒಡನಾಟ ಹೊಂದಿದ್ದಾರೆ.

ಮತ್ತೊಂದೆಡೆ ಸುರೇಶ್ ಅಂಗಡಿ ಪುತ್ರಿ ಅಥವಾ ಪತ್ನಿಗೆ ಟಿಕೆಟ್ ನೀಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ, ಆದರೆ ಸುರೇಶ್ ಅಂಗಡಿ ಕುಟುಂಬ ಸದಸ್ಯರು ರಾಜಕಾರಣದಿಂದ ದೂರ ಉಳಿಯುವ ಸಾಧ್ಯತೆಯಿದೆ ಎನ್ನಲಾಗಿದೆ. 

ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ನಾನು ಪಕ್ಷದ ವರಿಷ್ಠರಿಗೆ ಬೇಡಿಕೆ ಇಟ್ಟಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ, ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡಬೇಕು ಎಂದು ತಾವು ಬಯಸುತ್ತಿರುವುದಾಗಿ ತಿಳಿಸಿದ್ದಾರೆ, ತಮ್ಮ ಮಗನಿಗೆ ರಾಜಕೀಯ ಅನುಭವ ಕಡಿಮೆ ಮತ್ತು ಚುನಾವಣೆಗೆ ಸ್ಫರ್ಧಿಸಲು ಇನ್ನೂ ಅನುಭವ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT