ರಾಜಕೀಯ

ಶಿರಾ ಉಪಚುನಾವಣೆ: ದಲಿತರ ಓಲೈಕೆಗಾಗಿ ಟಿಬಿ ಜಯಚಂದ್ರ ಎರಡು ಬಾರಿ ನಾಮಪತ್ರ ಸಲ್ಲಿಕೆ

Shilpa D

ಶಿರಾ: ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಗುರುವಾರ ತಮ್ಮ ಅಭಿಮಾನಿಗಳ ಜೊತೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ದಲಿತ ಮತಗಳನ್ನು ಸೆಳೆಯುವ ಉದ್ದೇಶದಿಂದ ತಂತ್ರಗಾರಿಕೆ ರೂಪಿಸಿದ ಜಯಚಂದ್ರ ಜಿ ಪರಮೇಶ್ವರ್ ಮತ್ತು ಕೇಂದ್ರದ ಮಾಜಿ ಸಚಿವ ಕೆಎಚ್ ಮುನಿಯಪ್ಪ ಅವರ ಜೊತೆ ಸೇರಿ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದರು. ಕೊರೋನಾ ಸಮಸ್ಯೆ ಇದ್ದರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಶಿರಾದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಕಾಂಗ್ರೆಸ್​ನ ಧುರಿಣರು, ಶಕ್ತಿಪ್ರದರ್ಶನ ನಡೆಸಿದರು. 

ಇನ್ನು ರಾಜ್ಯದಲ್ಲಿ ಜನ ವಿರೋಧಿ, ನಿಷ್ಕ್ರಿಯ ಹಾಗೂ ಲೂಟಿ ಹೊಡೆಯುವ ಸರ್ಕಾರ ಇದ್ದು, ಈ ಉಪಚುನಾವಣೆ ಭ್ರಷ್ಟ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು‌ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಗುಡುಗಿದರು. ಶಿರಾ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಮತದಾರರು ರಾಜ್ಯದ ನಿಷ್ಕ್ರಿಯ ಸರ್ಕಾರದ ವಿರುದ್ಧ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಅವರು ಕರೆ ನೀಡಿದರು. ಇನ್ನೂ ಈ ಉಪಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿಯಾಗಲಿದೆ
ಎಂದ ಸಿದ್ದರಾಮಯ್ಯ, ಶಿರಾದಲ್ಲಿ ಜಯಚಂದ್ರ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತಾರೆ ಎಂದರು‌.

ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಶಿರಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಹಾಪೂರವೇ ಹರಿದಿತ್ತು. ಈಗ ಜನರು ತೋರಿಸುತ್ತಿರುವ ಉತ್ಸಾಹ, ವಿಶ್ವಾಸ ಈ ಚುನಾವಣೆಯ ಫಲಿತಾಂಶಹೇಗಿರುತ್ತದೆ ಅಂತಾ ತಿಳಿಯುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರು ಈ ಚುನಾವಣೆಯ ಫಲಿತಾಂಶದ ಮುಖಾಂತರ ಈ ಸರ್ಕಾರದ ಆಡಳಿತ ಸರಿಯಿಲ್ಲ ಎಂಬುದನ್ನು ತಿಳಿಸಬೇಕು ಎಂದು ಹೇಳಿದರು.

ಜಯಚಂದ್ರ ನನ್ನ ಸಂಪುಟದಲ್ಲಿ ಸಚಿವರಾಗಿದ್ದಾಗ ಶಿರಾದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ನಮ್ಮ ಸರ್ಕಾರ ಕ್ಷೀರ ಭಾಗ್ಯ, ಶಾದಿ ಭಾಗ್ಯ ಸೇರಿದಂತೆ 7 ಕೆಜಿ ಅಕ್ಕಿ ನೀಡಿದ್ದೇವೆ, ಹಿಂದುಳಿದ ವರ್ಗ ಮತ್ತು ದಲಿತರು ಕಾಂಗ್ರೆಸ್ ಗೆ ಮತ ನೀಡುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇನ್ನೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಬುಧವಾರ ಎಚ್ ಡಿ ರೇವಣ್ಣ ಬೃಹತ್ ಮರೆವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದರು. ಇಂದು ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ನಾಮಪತ್ರ ಸಲ್ಲಿಸಲಿದ್ದಾರೆ.

SCROLL FOR NEXT