ರಾಜಕೀಯ

ಆರ್ ಆರ್ ನಗರದಲ್ಲಿ ಬಿಜೆಪಿಗೆ ಗೆಲುವು ಸಾಧ್ಯತೆ, ಶಿರಾದಲ್ಲಿ ದಿಟ್ಟ ಹೋರಾಟ: ಸರ್ಕಾರದ ಆಂತರಿಕ ಮೌಲ್ಯಮಾಪನ

Nagaraja AB

ಬೆಂಗಳೂರು: ನವೆಂಬರ್ ಮೂರರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ಶಿರಾದಲ್ಲಿ ಗೆಲುವು ಸಾಧಿಸಬಹುದು ಅಥವಾ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬಹುದು ಎಂಬುದು ಸರ್ಕಾರದ ಆಂತರಿಕ ಮೌಲ್ಯಮಾಪನದಿಂದ ತಿಳಿದುಬಂದಿದೆ.

ಶಿರಾದಲ್ಲಿ ವಾಸ್ತವ ಸ್ಥಿತಿಯನ್ನು ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಟಿ. ಬಿ. ಜಯಚಂದ್ರ ಮತ್ತು ಬಿಜೆಪಿಯ ರಾಜೇಶ್ ಗೌಡ ನಡುವೆ  ನೇರ ಹೋರಾಟ ಇರಲಿದೆ ಎಂದು ಹೇಳಲಾಗಿದೆ.

ಶಿರಾದಲ್ಲಿ ಬಿಜೆಪಿ 17 ಸಾವಿರ ಮತಗಳನ್ನು ದಾಟಿಲ್ಲ, ಆದರೆ, ಸರ್ಕಾರದ ನೆರವು ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಪ್ರಚಾರದ ಕೊರತೆಯಿಂದ ಬಿಜೆಪಿಗೆ ವರದಾನವಾಗಬಹುದು. ಜೆಡಿಎಸ್ ಪಕ್ಷದ ಸಾಂಪ್ರಾದಾಯಿಕ ಮತಗಳು ರಾಜೇಶ್ ಗೌಡ ಅವರಿಗೆ ಬೀಳುವ ಸಾಧ್ಯತೆಯಿರುವುದಾಗಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಚುನಾವಣೆಯಲ್ಲಿ ಸೋಲುವುದು ಕಂಡುಬರುತ್ತಿದೆ. ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿ. ವೈ. ವಿಜಯೇಂದ್ರ ಶಿರಾದಲ್ಲಿ ಬೀಡು ಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಆಮಿಷವೊಡ್ಡುವ ಮೂಲಕ ಪಕ್ಷಕ್ಕೆ ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕೆಲವರು ಬೆಂಬಲ ನೀಡುವುದಾಗಿಯೂ ಹೇಳಿದ್ದಾರೆ.

ಜೆಡಿಎಸ್ ಮುಖಂಡರನ್ನು ಸಹ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಒಂದು ವೇಳೆ ಇದರಲ್ಲಿ ಯಶಸ್ವಿಯಾದರೆ ಶಿರಾದಲ್ಲಿ ಮೊದಲ ಬಾರಿಗೆ ಕಮಲ ಅರಳುವುದರಲ್ಲಿ ಅನುಮಾನವಿಲ್ಲ, ಶಿರಾ ಜೊತೆಗೆ ವಿಲೀನಕ್ಕೂ ಮುನ್ನ ಕಳ್ಳಂಬೆಳ್ಳಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಟಿ. ಬಿ. ಜಯಚಂದ್ರ ವಿರುದ್ಧ ವಿರೋಧಿ ಅಲೆ ಎಂಬುದು ಬಿಜೆಪಿ ಪ್ರಚಾರಕರು ಅಭಿಪ್ರಾಯಪಟ್ಟಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಾಜಿ ಶಾಸಕ ಮುನಿರತ್ನ ನಾಯ್ಡು ಈ ಬಾರಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನಿಂದ ಹೆಚ್. ಕುಸುಮಾ ಎದುರಾಳಿಯಾಗಿದ್ದಾರೆ. ಇಲ್ಲಿ ಬಿಜೆಪಿ 25-30 ಸಾವಿರ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

SCROLL FOR NEXT