ರಾಜಕೀಯ

ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಟವೆಲ್ ಹಾಕೋಕೆ: ಯತ್ನಾಳ್ ಹೇಳಿಕೆಗೆ ಆರ್​.ಅಶೋಕ್ ತಿರುಗೇಟು

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ. ಮುಖ್ಯಮಂತ್ರಿ ಖುರ್ಚಿ ಖಾಲಿ ಇದ್ದರೆ ಟವೆಲ್ ಹಾಕಬಹುದು. ಸೀಟ್ ಖಾಲಿ ಇಲ್ಲ ಎಂದ ಮೇಲೆ ಟವೆಲ್ ಎಲ್ಲಿ ಹಾಕುತ್ತೀರ? ಖಾಲಿ ಇಲ್ಲದ ಸೀಟ್​ಗೆ ಟವೆಲ್ ಹಾಕಿ, ಸುಮ್ಮನೆ ಸಮಯ ವ್ಯರ್ಥ ಮಾಡೋದು ಸರಿಯಲ್ಲ ಎಂದು ಕಂದಾಯ ಸಚಿವ ಆರ್​.ಅಶೋಕ್ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆಗೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ನಾವು ಚುನಾವಣೆ ಗೆದ್ದಿದ್ದೇವೆ. ಯಡಿಯೂರಪ್ಪನವರ ನೇತೃತ್ವದಲ್ಲೇ ಸರ್ಕಾರ ಮೂರು ವರ್ಷ ಪೂರೈಸಲಿದೆ. ಖಾಲಿ ಇಲ್ಲದ ಸೀಟ್​ಗೆ ಟವೆಲ್ ಹಾಕುವುದನ್ನು ಎಲ್ಲರೂ ನಿಲ್ಲಿಸಲಿ. ಇದು ಎಲ್ಲರಿಗೂ ಒಳ್ಳೆಯದು ಎಂದರು.

ಜೆಡಿಎಸ್ ಜೊತೆ ಬಿಜೆಪಿ ಚುನಾವಣೆಯಲ್ಲಿ ಹೊಂದಾಣಿಕೆ‌ ಮಾಡಿಕೊಂಡಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಜೆಡಿ ಎಸ್ ಪಕ್ಷವನ್ನು ಮುಗಿಸಿದ್ದೇ ಡಿಕೆ ಶಿವಕುಮಾರ್. ಉಪ ಚುನಾವಣೆಯ ಪ್ರಚಾರ ಹಾಗೂ ಸ್ಥಳೀಯವಾಗಿ ನೋಡಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಸ್ಪರ್ಧೆ ಇದೆ ಎಂದು ಅನಿಸುತ್ತದೆ. ಆದರೆ,ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ‌ ಮಾಡಿಕೊಂಡಿಲ್ಲ.ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಯಡಿಯೂರಪ್ಪನವರ ನಡೆಯನ್ನು ಬಿಜೆಪಿ ಹೈಕಮಾಂಡ್ ಸಹಿಸಿಕೊಳ್ಳುತ್ತಿಲ್ಲ ಎಂಬುದು ಶುದ್ಧ ಸುಳ್ಳು. ಯತ್ನಾಳ್ ಅವರು ಸ್ವಾರ್ಥಕ್ಕಾಗಿ ಹೇಳಿಕೆ ಕೊಡುತ್ತಿದ್ದಾರೆಯೇ ವಿನಃ ಅದು ಯಾವುದೇ ಪಕ್ಷದ್ದಾಗಲಿ ಅಥವಾ ಉತ್ತರ ಕರ್ನಾಟಕ ಭಾಗದ ಶಾಸಕರ ಹೇಳಿಕೆ ಅಲ್ಲ. ಅವರು ಮುಖ್ಯ ಮಂತ್ರಿಯಾಗಲು ಹಗಲು ಗನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ದುರಹಂಕಾರದ ಆಸೆ ಈಡೇರುವುದಿಲ್ಲ. ಉತ್ತರ ಕರ್ನಾಟಕ ಭಾಗದವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚೆಯೇ ಆಗಿಲ್ಲ. ಯಾರೇ ಇಂತಹ ಹೇಳಿಕೆ ನೀಡಿದರೂ ಪಕ್ಷ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಯತ್ನಾಳ್ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಹೇಳಿದ್ದಾರೆ.

ಯತ್ನಾಳ್ ಹೇಳಿಕೆಯಲ್ಲಿ ಬಿಜೆಪಿ ಪಕ್ಷದ ಯಾವುದೇ ನಾಯಕರ ಪಾತ್ರ ಇಲ್ಲ. ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಇಲ್ಲ. ಅಭಿವೃದ್ಧಿಯ ವಿಷಯದಲ್ಲಿ ಯಡಿಯೂರಪ್ಪ ಯಾರಿಗೂ ತಾರತಮ್ಯ ಮಾಡಿಲ್ಲ. ಬಿಜೆಪಿ ಪಾಲಿಗೆ ಬಿಎಸ್ ಯಡಿಯೂರಪ್ಪ ಆಲದ ಮರ ಇದ್ದಂತೆ. ಆಲದ ಮರದ ಕೆಳಗೆ ಇದ್ದು ನಾವು ರಾಜಕಾರಣ ಮಾಡಬೇಕು. ಯಡಿಯೂರಪ್ಪನವರನ್ನು ಟೀಕೆ ಮಾಡಿದ ಮಾತ್ರಕ್ಕೆ ನೀವು ಸಿಎಂ ಆಗೋಕೆ ಸಾಧ್ಯವಿಲ್ಲ. ಯಡಿಯೂರಪ್ಪನವರ ನಡೆಯನ್ನು ಬಿಜೆಪಿ ಹೈಕಮಾಂಡ್ ಸಹಿಸಿ ಕೊಳ್ಳುತ್ತಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಅವರು ಸ್ಪಷ್ಟಪಿಡಿಸಿದರು.

SCROLL FOR NEXT