ರಾಜಕೀಯ

ಎದುರಾಳಿ ನಮ್ಮ ಸರಿಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು: ಡಿಕೆ ಶಿವಕುಮಾರ್

Srinivasamurthy VN

ಬೆಂಗಳೂರು: ಎದುರಾಳಿ ನಮ್ಮ ಸರಿ ಸಮನಾಗಿದ್ದರೆ ಯುದ್ಧ ಮಾಡಬಹುದು. ನಮ್ಮ ಸರಿಸಮನಾಗಿ ಇಲ್ಲ ಎಂದರೆ ಯುದ್ಧ ಮಾಡಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತಗಳೊಂದಿಗೆ ಗೆಲುವು ಸಾಧಿಸಲಿದೆ. ಆರ್ ಆರ್ ನಗರದಲ್ಲಿ ಮಾರಾಮಾರಿ ರಾಜಕಾರಣ ನಡೆಯುತ್ತಿದೆ. ಹೆಣಗಳು ಬೀಳುತ್ತವೆ ಹೀಗಾಗಿ ಪ್ಯಾರಾ ಮಿಲಿಟರಿ ರಕ್ಷಣೆ  ನೀಡಬೇಕು ಎಂದು ಪತ್ರ ಬರೆಯುವುದಾಗಿ ಮಾಜಿ ಶಾಸಕರು ಹೇಳಿಕೆ ನೀಡಿದ್ದಾರೆ. ಅವರು ಮುಂಚೆಯೇ ಈ ಪತ್ರ ಬರೆಯಬೇಕಿತ್ತು. ಈಗ ತಡವಾಗಿದೆ. ಆ ಪತ್ರವನ್ನು ಮುಖ್ಯಮಂತ್ರಿಗಳಿಂದಲೋ ಅಥವಾ ಪಕ್ಷದ ಅಧ್ಯಕ್ಷರಿಂದಲೋ ಬರೆಸಿದ್ದಾರೆ ಉತ್ತಮವಾಗಿರುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಈ ಸರ್ಕಾರ ಕೇವಲ ಘೋಷಣೆ, ಆಶ್ವಾಸನೆಗಳನ್ನು ನೀಡುತ್ತಿದೆಯೇ ಹೊರತು. ಅವುಗಳನ್ನು ಈಡೇರಿಸುತ್ತಿಲ್ಲ. ಕಳೆದ ವರ್ಷ ಪ್ರವಾಹ ಬಂದಾಗ 35 ಸಾವಿರ ಕೋಟಿ ನಷ್ಟವಾಗಿದೆ ಎಂದಿದ್ದರು. ಕೇಂದ್ರ ಸರ್ಕಾರ ಕೇವಲ 1800 ಕೋಟಿ ಕೊಟ್ಟಿತ್ತು.  ಮುಖ್ಯಮಂತ್ರಿಗಳು ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಬಾಡಿಗೆ ಕಟ್ಟಲು 5 ಸಾವಿರ ಕೊಡುವುದಾಗಿ ಹೇಳಿದ್ದರು. ಇನ್ನು ಅದು ಜನರ ಕೈಗೆ ಸೇರಿಲ್ಲ. ಇನ್ನು ಈ ವರ್ಷದ ವೈಮಾನಿಕ ಸಮೀಕ್ಷೆ ಮಾಡಿದ್ದು, ಪರಿಹಾರ ಕೊಡೋದು ಯಾವಾಗ ಎಂದು ಪ್ರಶ್ನಿಸಿದರು.

ಕಂದಾಯ ಸಚಿವರು ನಮ್ಮ ಬಳಿ ದುಡ್ಡಿದೆ ಅಂತಾ ಹೇಳಿದ್ದಾರೆ. ಕೊರೊನಾ ಸಮಯದಲ್ಲಿ ನಾವು ಆಗ್ರಹ ಮಾಡಿದ ಮೇಲೆ ಒಂದಷ್ಟು ಜನಕ್ಕೆ ಪರಿಹಾರ ನೀಡುವುದಾಗಿ ಘೋಷಿಸಿದರು. ಇದುವರೆಗೂ ಆ ಪರಿಹಾರ ರೈತರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ ತಲುಪಿಲ್ಲ. ಈ ಸರ್ಕಾರ ಆಶ್ವಾಸನೆ ಘೋಷಣೆ ಮಾಡುತ್ತದೆಯೇ  ಹೊರತು ಅದನ್ನು ಸಾಕಾರಗೊಳಿಸುವುದಿಲ್ಲ ಎಂದರು. 
 

SCROLL FOR NEXT