ರಾಜಕೀಯ

ವಿಜಯದಶಮಿ ಬಳಿಕ ಉಪಚುನಾವಣೆ ಅಖಾಡಕ್ಕೆ ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ವಿಜಯದಶಮಿ ಹಬ್ಬ ಮುಗಿದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಪಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆಂದು ತಿಳಿದುಬಂದಿದೆ. 

ಎರಡು ವಿಧಾನಸಭೆ ಹಾಗೂ ನಾಲ್ಕು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪರ ಯಡಿಯೂರಪ್ಪ ಅವರು ಸೋಮವಾರದಿಂದ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ. 

ನವೆಂಬರ್ 3 ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಜೆಡಿಎಸ್ ಪಕ್ಷದ ಹಿರಿಯ ನಾಯಕ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಉಪಚುನಾವಣೆ ನಡೆಯಬೇಕಿರುವ ರಾಜರಾಜೇಶ್ವರಿ ನಗರ, ಶಿರಾದಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ. 

ಬಿಜೆಪಿ ಹಿರಿಯ ನಾಯಕರ ಹಾಗೂ ಎಂಎಲ್'ಸಿ ರವಿಕುಮಾರ್ ಅವರು ಮಾತನಾಡಿ, ಶೀಘ್ರದಲ್ಲಿ ಸಿಎಂ ಯಡಿಯೂರಪ್ಪ ಅವರು ಶಿರಾಗೆ ಭೇಟಿ ನೀಡಲಿದ್ದು, ರೋಡ್'ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ. ರೋಡ್ ಶೋ ವೇಳೆ ಯಡಿಯೂರಪ್ಪ ಅವರು ನೀರು ಮತ್ತು ವಸತಿ ಸಮಸ್ಯೆಗಳ ಕುರಿತು ಮಾತನಾಡಲಿದ್ದಾರೆ. ನಂತರ ರಾಜೇರಾಜೇಶ್ವರಿನಗರದಲ್ಲಿಯೂ ಮುಖ್ಯಮಂತ್ರಿಗಳು ಪ್ರಚಾರ ನಡೆಸಲಿದ್ದಾರೆಂದು ಹೇಳಿದ್ದಾರೆ. 

ಭಾನುವಾರ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ ಬಳಿಕ, ಸೋಮವಾರ ಮೈಸೂರು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ರಾಜರಾಜೇಶ್ವರಿ ನಗರ ಹಾಗೂ ಶಿರಾ ಎರಡೂ ಕ್ಷೇತ್ರಕ್ಕೂ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. 

ಶನಿವಾರವಷ್ಟೇ ತುಮಕೂರಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು, ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಆದರೆ, ಕೊರೋನಾ ಭೀತಿ ಹಾಗೂ ವಯಸ್ಸಿನ ಕಾರಣದಿಂದೀ ಈ ಕ್ಷೇತ್ರಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವರ್ಚುವಲ್ ರ್ಯಾಲಿ ನಡೆಸಲು ಚಿಂತನೆ ನಡೆಸುತ್ತಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

ಚುನಾವಣೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಖ್ಯಮಂತ್ರಿಗಳು ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳಲು ಈ ಚುನಾವಣೆ ಮುಖ್ಯವಾಗಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡೂ ಕ್ಷೇತ್ರಗಳಲ್ಲಿಯೂ ಗೆಲವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

SCROLL FOR NEXT