ರಾಜಕೀಯ

ಅನುದಾನಕ್ಕೆ ಇತಿಶ್ರೀ ಹಾಡಿದ್ದೇ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಆಕ್ರೋಶ

Raghavendra Adiga

ತುಮಕೂರು: ಹಿಂದಿನ ಸರ್ಕಾರದ ಒಳ್ಳೆಯ ಯೋಜನೆ, ಕಾರ್ಯಕ್ರಮಗಳಿಗೆ ಅನುದಾನ ನೀಡದೇ ಇತಿಶ್ರೀ ಹಾಡಿದ್ದೆ ಬಿಜೆಪಿ, ಯಡಿಯೂರಪ್ಪ ಸರ್ಕಾರದ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯವಾಗ್ದಾಳಿ ಮಾಡಿದ್ದಾರೆ.

ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಪ್ರಚಾರ ಕೈಗೊಂಡು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದಲ್ಲಿ ತಾವು ಜಾರಿಗೊಳಿಸಿದ್ದ ಕಾರ್ಯಕ್ರಮಗಳನ್ನೇಈಗಿನ ಬಿಜೆಪಿ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿರುವುದನ್ನು ಬಿಟ್ಟರೆ ಬೇರೆ ಯಾವುದೇ ಒಂದೇ ಒಂದು ಹೊಸ ಕಾರ್ಯಕ್ರಮನ್ನು ಜಾರಿಮಾಡಿಲ್ಲ ಎಂದು ದೂರಿದರು.

ಕೆ.ಆರ್ ಪೇಟೆಯಲ್ಲಿ ಹಣ ಹಂಚಿದಂತೆ ಶಿರಾದಲ್ಲೂ ಬಿಜೆಪಿಯವರು ಮತದಾರರ ಮನೆಬಾಗಿಲಿಗೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಈ ವಿಚಾರ ಪೊಲೀಸ್ ಇಲಾಖೆ, ಚುನಾವಣಾ ಆಯೋಗಕ್ಕೆ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿವೆ ಎಂದರು. ಬಿಜೆಪಿ ಸರ್ಕಾರ ನಮಗಿಂತ ದುಪ್ಪಟ್ಟು ಸಾಲ ಮಾಡಿದೆ.ಅಲ್ಲದೇ ಸಾಲ ಮಾಡಿದ ಹಣವನ್ನು ಜನರಿಗೂ ಉಪಯೋಗ ಮಾಡಿಲ್ಲ ಸಾಲ ಮಾಡಿ ತಾವೇ ಹೋಳಿಗೆ ತಿನ್ನುತ್ತಿದ್ದಾರೆ.

ರಾಜ್ಯದ ಜನ ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತ ಬಯಸಿದ್ದು, ಬಿಜೆಪಿ ಅದನ್ನು ನಿರಾಸೆಗೊಳಿಸಿದೆ. ಸರ್ಕಾರ ಭ್ರಷ್ಟಾಚಾರವನ್ನೇ ಪಾರದರ್ಶಕವಾಗಿ ಮಾಡುತ್ತಿದೆ. ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ಇದಕ್ಕೆ ಸಾಕ್ಷಿ ಎಂದರು.
ವಂಶಪಾರಂಪರ್ಯ ರಾಜಕಾರಣ ಭ್ರಷ್ಟಾಚಾರ ಗೆದ್ದಲು ಇದ್ದಂತೆ ಎಂದು ಪ್ರಧಾನಿ ಮೋದಿ ಬಿಹಾರದ ಚುನಾವಣಾ ಭಾಷಣದಲ್ಲಿ ಹೇಳಿದ್ದು ಬಹುಶಃ ಯಡಿಯೂರಪ್ಪನವರ ಆಡಳಿತ ನೋಡಿಯೇ ಇರಬೇಕು ಎಂದು ಮೂದಲಿಸಿದರು.ಸರ್ಕಾರದಲ್ಲಿ ಕೆಲವೊಂದು ಕೆಲಸ ಪರ್ಸೆಂಟೇಜ್ ಮೇಲೆ ಮಾರಿಕೊಳ್ಳುತ್ತಿದ್ದಾರೆ.10% ಕೊಟ್ಟರೆ ಮಾತ್ರ ಅನುದಾನ ಸಿಗುತ್ತಿದೆ.ಶಾಸಕರು ಹೇಳಿದರೆ ಅನುದಾನ ಸಿಗುವುದಿಲ್ಲ.ಮೋದಿ ನಾ ಖಾವುಂಗಾ ಖಾನೇದೂಂಗಾ ಎನ್ನುತ್ತಾರೆ. ಜನರ ಹೆಣಗಳ ಮೇಲೆ ಸರ್ಕಾರ ದುಡ್ಡು ಮಾಡಲು ಹೊರಟಿದೆ ಎಂದರು.

ಸಿಎಂ ಮೊಮ್ಮಗ ಶಶಿಧರ ಮರಡಿಗೆ ದುಡ್ಡು ಹೋಗುತ್ತಿದೆ. ಆದರೆ ಯಡಿಯೂರಪ್ಪ ಸರ್ಕಾರದ ಲೂಟಿ ಅವರ ಕಣ್ಣಿಗೆ ಕಾಣುತ್ತಿಲ್ಲವೇ? ರಾಜ್ಯದಲ್ಲಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಮೂರು ಬಾರಿ ಪ್ರವಾಹ ಬಂದಿದೆ.ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ರೂಪಾಯಿ ಅನುದಾನದ ನೆರವು ಕೊಟ್ಟಿಲ್ಲ.ಯಡಿಯೂರಪ್ಪ ಕೇಂದ್ರದಿಂದ 53 ಸಾವಿರ ಕೋಟಿ ಪಡೆಯುತ್ತೇವೆ ಎಂದಿದ್ದರು.ಆದರೆ ಅದನ್ನು ಬಿಟ್ಟು 33 ಸಾವಿರ ಕೋಟಿ ರೂ ಸಾಲ ಮಾಡಿ ಒಟ್ಟು 68 ಸಾವಿರ ಕೋಟಿ ಸಾಲ ಮಾಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಸರ್ಕಾರ ರಾಜ್ಯವನ್ನೇ ಹಾಳು ಮಾಡಿದೆ. ಸಿಎಂ ಪುತ್ರ ವಿಜಯೇಂದ್ರ ಕೆ.ಆರ್.ಪೇಟೆಯಲ್ಲಿ ಮಾಡಿದಂತೆ ಇಲ್ಲಿಯೂ ಅದನ್ನೇ ನಕಲು ಮಾಡಲು ಹೊರಟಿದ್ದಾರೆ. ಇದನ್ನು ಕಂಡೂ ಕೂಡ ಪೊಲೀಸರು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಸಿದ್ದರಾಮಯ್ಯ ದೂರಿದರು. 
 

SCROLL FOR NEXT