ರಾಜಕೀಯ

ಸಿದ್ದರಾಮಯ್ಯ, ದೇವೇಗೌಡ್ರೇ ಪ್ರಚಾರಕ್ಕೆ ಹೋದ ಮೇಲೆ ನಾನು ಹೋಗದಿದ್ದರೆ ತಪ್ಪಾಗುತ್ತೆ: ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಎರಡು ವಿಧಾನಸಭಾ ಕ್ಷೇತ್ರಗ ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳು ಶತಪ್ರಯತ್ನಗಳನ್ನು ಮಾಡುತ್ತಿವೆ. 

ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಘಟಾನುಘಟಿಗಳಾದ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಕೆ.ಶಿವಕುಮಾರ್ ತೊಡಗಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಮಾತ್ರ ಇನ್ನೂ ಪ್ರಚಾರಕ್ಕಳಿದಿರಲಿಲ್ಲ. ಇದೀಗ ಪ್ರಚಾರಕ್ಕೆ ಯಡಿಯೂರಪ್ಪ ಕೂಡ ಧುಮುಕಿದ್ದು, ಮತದಾರರನ್ನು ಓಲೈಸಲು ಮುಂದಾಗಿದ್ದಾರೆ. 

ಶಿರಾದಲ್ಲಿ ಪ್ರಚಾರ ನಡೆಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ ಅವರು ನಾನು ಉಪಚುನಾವಣೆಯ ಪ್ರಚಾರಕ್ಕೆ ಹೋಗಬೇಕೆಂದು ಇರಲಿಲ್ಲ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್, ಕುಮಾರಸ್ವಾಮಿ ಹಾಗೂ ದೇವೇಗೌಡರೇ ಪ್ರಚಾರಕ್ಕೆ ಹೋಗಿರುವಾಗ ನಾನು ಪ್ರಚಾರಕ್ಕೆ ಹೋಗಲಿಲ್ಲ ಎಂದರೆ ತಪ್ಪಾಗುತ್ತದೆ. ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆಂದು ಹೇಳಿದ್ದಾರೆ. 

ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಯಡಿಯೂರಪ್ಪ ಅವರು, ಉಪಚುನಾವಣೆ ಪೂರ್ಣಗೊಳ್ಳಬೇಕು. ಪ್ರಸ್ತುತ ಚುನಾವಣೆಯಲ್ಲಿ ಕಾರ್ಯಮಗ್ನರಾಗಿದ್ದೇವೆ. ಚುನಾವಣೆ ಪೂರ್ಣಗೊಂಡ ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆಗೆ ಚರ್ಚಿಸಿ ಸಂಪುಟ ವಿಸ್ತರಣೆ ಮಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಉಪಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂಬ ವಿರೋಧ ಪಕ್ಷ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಹೌದು, ಬದಲಾವಣೆಗಳಾಗಲಿವೆ. ಎರಡೂ ಕ್ಷೇತ್ರದಲ್ಲಿಯೂ ಭಾರೀ ಮತಗಳ ಅಂತರದಿಂದ ನಾವು ಕೆಲವು ಸಾಧಿಸಲಿದ್ದೇವೆ. ಕಾಂಗ್ರೆಸ್ ಅದರಿಂದ ಅವಮಾನಕ್ಕೊಳಗಾಗಲಿದೆ ಎಂದಿದ್ದಾರೆ. 

SCROLL FOR NEXT