ರಾಜಕೀಯ

ನ.3ರ ಉಪ ಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ

Sumana Upadhyaya

ಬೆಂಗಳೂರು: ನಾಡಿದ್ದು ನವೆಂಬರ್ 3ರಂದು ನಡೆಯಲಿರುವ ಆರ್ ಆರ್ ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೂ ಸಹ ಬಿ ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿಯೂ ಧಕ್ಕೆ ತರದು. ಆದರೆ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವುದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಬಹಳ ಮುಖ್ಯವಾಗಿದೆ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಶಿವಕುಮಾರ್ ಅವರಿಗೆ ಇದು ಚೊಚ್ಚಲ ಚುನಾವಣೆ ಎಂಬುದು ಮಾತ್ರವಲ್ಲದೆ ಪಕ್ಷದಲ್ಲಿ ಅವರು ಏಕಾಂಗಿ ಹೋರಾಟಗಾರ ಎಂಬ ಇಮೇಜ್ ನ್ನು ಹೋಗಲಾಡಿಸಲು ಕೂಡ ಈ ಉಪ ಚುನಾವಣೆ ಮುಖ್ಯವಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಲ್ಲಿಂದ ಪಕ್ಷದೊಳಗಿನ ಭಿನ್ನಮತ, ಹಲವು ಬಣಗಳನ್ನು ಒಗ್ಗೂಡಿಸಿ ಸೇತುವೆಯಾಗಿ ನಿಲ್ಲಲು ಶಿವಕುಮಾರ್ ಶ್ರಮಿಸುತ್ತಲೇ ಇದ್ದಾರೆ. ಇಡೀ ಕಾಂಗ್ರೆಸ್ ಪಕ್ಷಕ್ಕೆ ಈ ಉಪ ಚುನಾವಣೆ ಅಗ್ನಿಪರೀಕ್ಷೆ.

ಪಕ್ಷದ ಸವಾಲಿನ ಸಮಯದಲ್ಲಿ ಟ್ರಬಲ್ ಶೂಟರ್, ಕ್ರೈಸಿಸ್ ಮ್ಯಾನೇಜರ್, ಮಿ.ಡೆಪೆಂಡೇಬಲ್ ಎಂಬ ಭಾವನೆಯನ್ನು ಬೆಳೆಸಿಕೊಂಡು ಬಂದಿರುವ ಶಿವಕುಮಾರ್ ಗೆ ಈಗ ಅದನ್ನು ಮತವಾಗಿ ಬದಲಾಯಿಸುವ ಅನಿವಾರ್ಯತೆಯಿದೆ. 2018ರ ಬಳ್ಳಾರಿ ಲೋಕಸಭಾ ಉಪ ಚುನಾವಣೆಯಂತೆ ತನ್ನ ಮತ್ತು ಸೋದರ ಡಿ ಕೆ ಸುರೇಶ್ ಹೊರತುಪಡಿಸಿ ಉಳಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಗೆದ್ದದ್ದು ಕಡಿಮೆಯೇ.

ಕೆಪಿಸಿಸಿ ಅಧ್ಯಕ್ಷರಾಗಿ, ತಮ್ಮ ವಿರೋಧಿಗಳನ್ನು ಬದಿಗಿರಿಸಿ ಪಕ್ಷವನ್ನು ಮುನ್ನಡೆಸಿ, ಕೇಡರ್ ಮಟ್ಟದಲ್ಲಿ ಪ್ರೋತ್ಸಾಹ ನೀಡಿ, ನಾಯಕರನ್ನು ಒಗ್ಗೂಡಿಸಿ ತಮ್ಮ ಅನುಕೂಲ ವಲಯದಿಂದ ಚುನಾವಣೆಯಲ್ಲಿ ಗೆಲ್ಲುವುದು ಶಿವಕುಮಾರ್ ಅವರಿಗೆ ಮುಖ್ಯವಾಗಿದೆ. ಕಳೆದ 10 ದಿನಗಳಲ್ಲಿ ನಾಲ್ಕು ದಿನ ಶಿರಾದಲ್ಲಿ ಪ್ರಚಾರ ನಡೆಸಿದ್ದ ಶಿವಕುಮಾರ್ ರಾಜರಾಜೇಶ್ವರಿ ನಗರದಲ್ಲಿ 6 ದಿನ ಪ್ರಚಾರ ನಡೆಸಿದ್ದಾರೆ.

SCROLL FOR NEXT