ರಾಜಕೀಯ

ವಿಧಾನಸಭೆ ಅಧಿವೇಶನ: ಸರ್ಕಾರದ ವಿರುದ್ಧ ಹರಿಹಾಯಲು ಕಾಂಗ್ರೆಸ್ ಭರ್ಜರಿ ತಯಾರಿ, 1,200ಕ್ಕೂ ಹೆಚ್ಚು ಪ್ರಶ್ನೆ ಕೇಳಲು ಸಿದ್ಧತೆ

Manjula VN

ಬೆಂಗಳೂರು: ಕೊರೋನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಎಸಗಿದೆ ಹಾಗೂ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್ ಪಕ್ಷ ಭರ್ಜರಿ ಸಿದ್ಧತೆ ನಡೆಸಿದೆ. ಅಲ್ಲದೆ, 1,200ಕ್ಕೂ ಹೆಚ್ಚು ಪ್ರಶ್ನೆಗಳನ್ನು ಸರ್ಕಾರದ ಮುಂದಿಡಲು ಕಾಂಗ್ರೆಸ್ ಶಾಸಕರು ಸಜ್ಜಾಗಿದ್ದಾರೆ. 

ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್'ನ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಝೂಮ್ ಸಂವಾದ ನಡೆಸಿ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. 

ಈ ವೇಳೆ ಮಾಜಿ ಸಚಿವರ ತಂಡ ಹಾಗೂ ಶಾಸಕರು ಸಿದ್ಧಪಡಿಸಿರುವ ಪ್ರಶ್ನೆಗಳು ಪ್ರಸ್ತಾಪಿಸಲಾಯಿತು. ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುವ ವಿಚಾರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿ ಹಾಗೂ ವಿಧಾನಸಬೆ, ವಿಧಾನಪರಿಷತ್'ನ ವಿರೋಧ ಪಕ್ಷದ ಮುಖ್ಯ ಸಚೇತಕರ ಕಚೇರಿ ಶಾಸಕರಿಗೆ ನೆರವಾಗಬೇಕೆಂದು ಸಿದ್ದರಾಮಯ್ಯ ಸೂಚಿಸಿದರು. 

ಶಾಸಕಾಂಗ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಈ ಕುರಿತುಮುಖ್ಯಮಂತ್ರಿಗಳೇ ಕೆಲವು ಕಡೆ ಪ್ರಸ್ತಾಪಿಸಿದ್ದಾರೆ. ಪರ್ಸೆಂಟೇಜ್ ಕೊಡದ ಶಾಸಕರ ಕ್ಷೇತ್ರಗಳಿಗೆ ಅನುದಾನವಿಲ್ಲ ಎಂಬಂತಾಗಿದೆ. ಸಚಿವರ ಕ್ಷೇತ್ರಗಳಲ್ಲಿಯೂ ಅನುದಾನಕ್ಕಾಗಿ ಲಂಚ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಕುರಿತಾಗಿಯೂ ಸದನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಬೇಕು ಎಂದು ಹೇಳಿರುವುದಾಗಿ ತಿಳಿದುಬಂದಿದೆ. 

ಕೇಂದ್ರದಿಂದ ನಾವು ಸಾಕಷ್ಟು ನೆರವು ಪಡೆಯುತ್ತೇವೆಂದು ಯಡಿಯೂರಪ್ಪ ಮತ್ತಿತರ ನಾಯಕರು ಹೇಳಿದ್ದರು. ಜಿಎಸ್'ಟಿ ವಿಚಾರದಲ್ಲಿ ಪರಿಹಾರ ಕೇಳಿದರೆ ನೀವು ಸಾಲ ಮಾಡಿ ನಷ್ಟ ತುಂಬಿಕೊಳ್ಳಿ ಎಂದು ಕೇಂದ್ರದ ಹಣಕಾಸು ಸಚಿವರು ಹೇಳುತ್ತಾರೆ. ಇಂತಹ ವಿಚಾರಗಳ ಬಗ್ಗೆಯೂ ಪ್ರಶ್ನೆ ಮಾಡಬೇಕಿದೆ. ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 25 ಸಂಸದರು ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಸ್ವರ್ಗ ಸೃಷ್ಟಿ ಮಾಡುತ್ತೇವೆಂದಿದ್ದ ಯಡಿಯೂರಪ್ಪ ಅವರು ಉಸಿರು ಕೂಡ ಎತ್ತುತ್ತಿಲ್ಲ ಎಂದು ಕಿಡಿಕಾರಿದರು. 

SCROLL FOR NEXT