ರಾಜಕೀಯ

ನಾಲ್ಕೈದು ದಿನಗಳಲ್ಲಿ ದೆಹಲಿಗೆ ಸಿಎಂ ಯಡಿಯೂರಪ್ಪ: ಮಹತ್ವದ ಮೂರು ವಿಷಯಗಳ ಬಗ್ಗೆ ಚರ್ಚೆ!

Shilpa D

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ ಶೀಘ್ರವೇ ದೆಹಲಿಗೆ ತೆರಳಲಿದ್ದಾರೆ. ಕೇಂದ್ರದ ವರಿಷ್ಠರ ಜೊತೆ ಚರ್ಚಿಸಲು ಸಮಯ ಕೇಳಿರುವುದಾಗಿ ಸಿಎಂ ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಇನ್ನು ನಾಲ್ಕೈದು ದಿನಗಳಲ್ಲಿ ದೆಹಲಿಗೆ ಹೋಗುವುದಾಗಿ ಸಿಎಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯಡಿಯೂರಪ್ಪ ದೆಹಲಿಯಲ್ಲಿ ವರಿಷ್ಠರನ್ನು ಮುಖಾಮುಖಿ ಭೇಟಿಯಾಗಿ ಸಂಪುಟ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ರಾಜ್ಯದ ಪ್ರವಾಹ ಪರಿಹಾರ ನಿರ್ವಹಣೆಗೆ ಸಿಎಂ ಕೇಂದ್ರದಿಂದ 8 ಸಾವಿರ ಕೋಟಿ ಅನುದಾನ ಕೋರಿದ್ದರು, ಆದರೆ ಕೇಂದ್ರ ಸರ್ಕಾರ ಅದರಲ್ಲಿ ಕೇವಲ ಶೇ.10 ರಷ್ಟು ಮಾತ್ರ ನೀಡಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಿಎಂ ಹೆಚ್ಚಿನ ಅನುದಾನ ಕೋರುವುದರ ಜೊತೆಗೆ ಕಳೆದ ವರ್ಷದಿಂದ ಉಂಟಾದ ಪ್ರವಾಹ ಹಾನಿಯ ಸಂಬಂಧವು  ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಮೂರನೇ ಮಹತ್ವದ ವಿಷಯವಾಗಿ ಕೊರೋನಾದಿಂದ ಕಂಗೆಟ್ಟಿರುವ ರಾಜ್ಯ ದಲ್ಲಿ ಆಕ್ಸಿಜನ್ ಕೊರತೆ ಬಹುದೊಡ್ಡ ಸಮಸ್ಯೆಯಾಗಿದೆ,  ಹೀಗಾಗಿ ಆಕ್ಸಿಜನ್ ಘಟಕ ಸ್ಥಾಪನೆ ಸೇರಿದಂತೆ ಮತ್ತಿತರ ಮೂಲಭೂತ ಸೌಕರ್ಯಗಳ ಬಗ್ಗೆಯೂ ಚರ್ಚಿಸಲಿದ್ದಾರೆ.

ಸೆಪ್ಟಂಬರ್ 30 ರಂದು ವಿಧಾನಸಭೆ ಅಧಿವೇಶನ ಮುಕ್ತಾಯವಾಗಲಿದ್ದು, ಅಲ್ಲಿಯವರೆಗೂ ಸಂಪುಟ ವಿಸ್ತರಣೆ ನಡೆಯುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ, ಅಧಿವೇಶನ ಆರಂಭಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡದಿದ್ದರೇ ಸದನಕ್ಕೆ ಗೈರಾಗುವುದಾಗಿ ಕೆಲವು ಶಾಸಕರು ಬೆದರಿಕೆ ಹಾಕಿದ್ದಾರೆಂದು ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ,  ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಕರ್ನಾಟಕದ ಮೂವರು ಕೇಂದ್ರ ಸಚಿವರಾದ, ಡಿ ವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಕ್ಯಾಬಿನೆಟ್ ವಿಸ್ತರಣೆ ಸಂಬಂಧದ ಅನೇಕ ಮಂತ್ರಿಗಳು
ಮತ್ತು ಬಿಜೆಪಿ ಮುಖಂಡರು ಈಗಾಗಲೇ ದೆಹಲಿಗೆ ಭೇಟಿ ನೀಡಿ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು.

SCROLL FOR NEXT