ರಾಜಕೀಯ

ಕೃಷಿ ಸಂಬಂಧಿತ ಮಸೂದೆ ರೈತರ ಪಾಲಿನ ಮರಣಶಾಸನ: ಸಿದ್ದರಾಮಯ್ಯ

Lingaraj Badiger

ಬೆಂಗಳೂರು: ಸಂಸತ್ ನಲ್ಲಿ ವಿರೋಧಪಕ್ಷಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳನ್ನು ಹಿಚುಕಿ, ರೈತರ ಪಾಲಿಗೆ ಮರಣಶಾಸನವಾಗಿರುವ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಗೆ ಬಲಾತ್ಕಾರದಿಂದ ಅಂಗೀಕಾರ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೋನಾ ರೋಗವನ್ನು ನಿಯಂತ್ರಿಸಲಾಗದೆ ಮಂಡಿ ಊರಿ ದೇಶದ ಜನರನ್ನು ಸಾವು-ನೋವಿನ ದವಡೆಗೆ ನೂಕುತ್ತಿರುವ ಅಸಮರ್ಥ ಸರ್ಕಾರ, ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಕೊರೋನೋತ್ತರ ಭಾರತದ ಏಕೈಕ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ ಎಂದು ಕಿಡಿಕಾರಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಬಗ್ಗೆ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೊಳಪಡಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ದುರ್ಬಲರು, ಅಸಹಾಯಕರು ಮತ್ತು ಅಸಂಘಟಿತರಾಗಿರುವ ಶೇಕಡಾ 80ರಷ್ಟಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿ ಮಾರುಕಟ್ಟೆಯನ್ನು ಸರ್ಕಾರದ ನೆರವಿಲ್ಲದೆ ಸ್ವಯಂನಿಯಂತ್ರಿಸಲಾರರು. ಆ ಕೆಲಸ ಮಾಡುತ್ತಿದ್ದ ಎಪಿಎಂಸಿಯನ್ನು ನಾಶಮಾಡುವುದೆಂದರೆ ಪೂರ್ಣ ಕೃಷಿಕ್ಷೇತ್ರವನ್ನು ಮಣ್ಣುಪಾಲು ಮಾಡುವುದು. ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ( ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ದುರುದ್ದೇಶ. ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯುವ ಮನೆಹಾಳು ಕೆಲಸ ಎಂದು ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

SCROLL FOR NEXT