ರಾಜಕೀಯ

ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಸುರೇಶ್ ಅಂಗಡಿ

Sumana Upadhyaya

ಬೆಂಗಳೂರು: ಕೋವಿಡ್-19ನಿಂದ ಮೃತಪಟ್ಟಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಬೆಳಗಾವಿ ಕ್ಷೇತ್ರದಿಂದ 2004ರಿಂದ ಸತತ ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಗೆದ್ದುಬಂದ ಸರದಾರ.

ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿರುವ 65 ವರ್ಷದ ಸುರೇಶ್ ಅಂಗಡಿ ತಮ್ಮ ಯುವ ವಯಸ್ಸಿನಿಂದಲೇ ಆರ್ ಎಸ್ಎಸ್ ಜೊತೆ ಗುರುತಿಸಿಕೊಂಡಿದ್ದರು.

ಬೆಳಗಾವಿ ಜಿಲ್ಲೆಯ ಕೊಪ್ಪ ಗ್ರಾಮದಲ್ಲಿ ಸೋಮವ್ವ ಮತ್ತು ಚನ್ನಬಸಪ್ಪ ಲಿಂಗಾಯತ ಅಂಗಡಿ ದಂಪತಿಗೆ 1955ರ ಜೂನ್ 1ರಂದು ಜನಿಸಿದ ಸುರೇಶ್ ಅಂಗಡಿ  ಬೆಳಗಾವಿಯ ಎಸ್ ಎಸ್ಎಸ್ ಸಮಿತಿ ಕಾಮರ್ಸ್ ಕಾಲೇಜಿನಿಂದ ಪದವಿ ಮುಗಿಸಿದ್ದರು. ನಂತರ ರಾಜಾ ಲಕಮ್ ಗೌಡ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಮಾಡಿದರು.

ಸುರೇಶ್ ಅಂಗಡಿ ಮೂಲತಃ ಉದ್ಯಮಿ. ತಮ್ಮ ರಾಜಕೀಯ ಜೀವನದಲ್ಲಿ ದೊಡ್ಡ ಬ್ರೇಕ್ ಕಂಡಿದ್ದು ಸುರೇಶ್ ಅಂಗಡಿ ಅವರು ಬೆಳಗಾವಿಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 2004ರಲ್ಲಿ ಬಿಜೆಪಿಯಿಂದ ಆಯ್ಕೆಯಾಗುವವರೆಗೂ ಉಪಾಧ್ಯಕ್ಷರಾಗಿದ್ದರು.

ನಂತರ ಸತತವಾಗಿ 2009,2014,2019ರಲ್ಲಿ ಸಂಸದರಾಗಿ ಮರು ಆಯ್ಕೆಯಾಗುತ್ತಾ ಬಂದರು.

ಶಿಕ್ಷಣ ಪ್ರೇಮಿಯಾಗಿದ್ದ ಸುರೇಶ್ ಅಂಗಡಿ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಶಿಕ್ಷಣ ಸಂಸ್ಥೆಯನ್ನು ಹೊಂದಿದ್ದು, ಅದರಡಿ ಹಲವು ಕಾಲೇಜುಗಳಿವೆ. ಕಳೆದ ಬಾರಿ ಸಂಸದರಾಗಿ ಆಯ್ಕೆಗೊಂಡಾಗ ಅವರಿಗೆ ಮಂತ್ರಿ ಪದವಿ ಒಲಿಯಿತು. ಆ ಸಂದರ್ಭದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕನಸು ಕಂಡಿದ್ದರು.ಹಲವು ಕೆಲಸಗಳನ್ನು ಮಾಡಿದರು ಸಹ.

ಬೆಂಗಳೂರಿಗರ ಕನಸಾಗಿದ್ದ ಉಪ ನಗರ ರೈಲ್ವೆ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಅವರ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ.

SCROLL FOR NEXT