ರಾಜಕೀಯ

ಸಚಿವ ಸಂಪುಟ ಪುನರ್ ರಚನೆ: ಸಿಟಿ ರವಿ ಸೇರಿ ನಾಲ್ವರಿಗೆ ಕೊಕ್ ಸಾಧ್ಯತೆ, ತೀವ್ರಗೊಳ್ಳಲಿದೆ ಆಕಾಂಕ್ಷಿಗಳ ಲಾಬಿ

Lingaraj Badiger

ಬೆಂಗಳೂರು: ವಿಧಾನಮಂಡಲ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಮತ್ತೆ ದೆಹಲಿ ಪ್ರವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೆಡಿಯಾಗಿದ್ದು, ಇದೀಗ ಮತ್ತೊಮ್ಮೆ ಸಚಿವ ಸಂಪುಟ ಪುನರ್ ರಚನೆ ಹುತ್ತಕ್ಕೆ ಕೈ ಹಾಕಿದ್ದಾರೆ.

ಬಹುತೇಕ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೆಹಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ಪುನರ್ ರಚನೆ ಕುರಿತು ಸಿಎಂ ಯಡಿಯೂರಪ್ಪ ಅವರು ಚರ್ಚಿಸಲಿದ್ದಾರೆ.

ಈಗಾಗಲೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಚಿವ ಸಿಟಿ ರವಿ ಸೇರಿಗಂತೆ ನಾಲ್ಕೈದು ಸಚಿವರು ತಮ್ಮ ಸಚಿವ ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ದೊರಕಿಸಿಕೊಡುವ ಆಲೋಚನೆ ಯಡಿಯೂರಪ್ಪ ಅವರದ್ದಾಗಿದ್ದು, ಇದಕ್ಕಾಗಿ ವರಿಷ್ಠರ ಹಸಿರು ನಿಶಾನೆಗಾಗಿ ದೆಹಲಿಯತ್ತ ಮುಖ ಮಾಡಿದ್ದಾರೆ.

ಮೂಲಗಳ ಪ್ರಕಾರ ಅಕ್ಟೋಬರ್ 2ರಂದು ಸಚಿವ ಸಿ.ಟಿ.ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದಾಗಿ ಸಂಪುಟದಲ್ಲಿ ಒಟ್ಟು 7 ಸ್ಥಾನಗಳು ಖಾಲಿ ಉಳಿಯಲಿದ್ದು, ಅಕ್ಟೋಬರ್ ಮೊದಲ ಅಥವಾ 2ನೇ ವಾರದಲ್ಲಿ ಸಂಪುಟ ಪುನಾರಚನೆಯಾಗುವ ಲಕ್ಷಣಗಳು ಗೋಚರಿಸಿವೆ.

ಒಂದು ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವರಿಷ್ಠರ ಒಪ್ಪಿಗೆ ಪಡೆದು ಸಂಪುಟ ಪುನಾರಚನೆ ಮಾಡಿದರೆ ಸಂಪುಟದಲ್ಲಿ ಹಾಲಿ ಇರುವ ನಾಲ್ವರು ಸಚಿವರನ್ನು ಕೈಬಿಟ್ಟು ಹೊಸದಾಗಿ 10 ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಚಿವರಾದ ಸಿಟಿ ರವಿ, ಪ್ರಭು ಚವ್ಹಾಣ್, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ ಸಂಪುಟದಿಂದ ಕೋಕ್ ಪಡೆಯುವ ಪಟ್ಟಿಯಲ್ಲಿದ್ದಾರೆ. ಸಂಪುಟದಲ್ಲಿ 10 ಸ್ಥಾನಗಳು ಖಾಲಿ ಉಳಿಯುವುದರಿಂದ ವಲಸಿಗ ಮತ್ತು ಮೂಲ ಒಳಗೊಂಡ 10 ಮಂದಿಯನ್ನು ಹೊಸದಾಗಿ ತೆಗೆದುಕೊಂಡು ಪೂರ್ಣ ಮಟ್ಟದ ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ಮಾಡಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

SCROLL FOR NEXT