ರಾಜಕೀಯ

ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ನಿಂದ ಸಹಿ ಸಂಗ್ರಹ: ಸುರ್ಜೇವಾಲಾ

Lingaraj Badiger

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಕ್ಟೋಬರ್ 10 ರಂದು ರೈತ ಸಮಾವೇಶ ನಡೆಸಲಾಗುವುದು. ಅಕ್ಟೋಬರ್ 30ರೊಳಗೆ ಬಿಜೆಪಿ ನೀತಿ ವಿರುದ್ಧ ದೇಶಾದ್ಯಂತ ಜನರಿಂದ 2 ಕೋಟಿ ಸಹಿ ಸಂಗ್ರಹಿಸಿ ಅದನ್ನು ಎಐಸಿಸಿ ನಾಯಕಿ ಸೋನಿಯಾಗಾಂಧಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಮೋದಿ ಹಾಗೂ ಯಡಿಯೂರಪ್ಪ ರೈತರ ಪರ ಕಾಯ್ದೆ ಜಾರಿಗೆ ತರುತ್ತಿದ್ದೇವೆ ಎಂದು ಹೇಳುತ್ತಿದ್ದರಾದರೂ ದೇಶದ ಎಲ್ಲ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿವೆ. ಪ್ರಧಾನಿ ಮೋದಿ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಕಾಯ್ದೆ ಜಾರಿಯಾದರೆ ಕೇವಲ ಸಿರಿವಂತರಷ್ಟೇ ಭೂಮಿ ಖರೀದಿಸುತ್ತಾರೆ. ಆಗ ರೈತರು ಎಲ್ಲಿಗೆ ಹೋಗಬೇಕು. ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆಂದು ಮೋದಿ ಹಸಿಸುಳ್ಳು ಹೇಳುತ್ತಿದ್ದಾರೆ ಎಂದರು.

ಇದಕ್ಕು ಮುನ್ನ ರೈತರ ರಾಜ್ಯ ಬಂದ್‌ ಬೆಂಬಲಿಸಿ ಕನ್ನಡದಲ್ಲಿ ಟ್ವೀಟ್‌ ಮಾಡಿದ್ದ ಸುರ್ಜೇವಾಲ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರೇ ರೈತರ ಕರ್ನಾಟಕ ಬಂದ್ ಗೆ ನಿಷೇಧ ಹೇರುವ ಬದಲು, ನಿಮ್ಮ ರೈತ-ಕಾರ್ಮಿಕ ವಿರೋಧಿ ಮನಸ್ಥಿತಿಗೆ ನಿಷೇಧ ಹೇರಿ ಎಂದು ಒತ್ತಾಯಿಸಿದ್ದರು.

ರಾಜ್ಯವನ್ನೇ ಹರಾಜು ಹಾಕುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿ ಅದನ್ನು ಹಿಂಪಡೆಯಿರಿ, ಎಪಿಎಂಸಿ ಕಾಯ್ದೆಗೆ ಮಾಡಿರುವ ಕೆಟ್ಟ ತಿದ್ದುಪಡಿ ರದ್ದುಮಾಡಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಇದು ನಿಮಗೆ ಅಗ್ನಿ ಪರೀಕ್ಷೆ! ಎಂದು ಎಚ್ಚರಿಕೆ ನೀಡಿದ್ದಾರೆ.

SCROLL FOR NEXT