ರಾಜಕೀಯ

ಉಪ ಚುನಾವಣೆ ಹಿನ್ನಲೆ ಸಂಪುಟ ವಿಸ್ತರಣೆ ಮುಂದೂಡಿಕೆ?: ಸಿಎಂ ಯಡಿಯೂರಪ್ಪ ದೆಹಲಿ ಯಾತ್ರೆ ರದ್ದು

Lingaraj Badiger

ಬೆಂಗಳೂರು: ಶಿರಾ ಹಾಗೂ ಆರ್‌.ಆರ್‌ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಬಿಹಾರ ಮತ್ತು ಇತರೆ 56 ಕ್ಷೇತ್ರಗಳ ಉಪ ಚುನಾವಣೆಗಳ ಬಳಿಕ ಸಂಪುಟ ಪುನಾರಚನೆ ಮಾಡುವ ನಿರ್ಧಾರಕ್ಕೆ ಸಿಎಂ ಬಂದಿದ್ದಾರೆ.

ಯಡಿಯೂರಪ್ಪ ಅವರು ಒಂದೆರಡು ದಿನಗಳಲ್ಲಿ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಒಪ್ಪಿಗೆ ಪಡೆಯುವ ತೀರ್ಮಾನ ಮಾಡಿದ್ದರು. ಸಿ.ಟಿ.ರವಿಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನೀಡಿದ ಹಿನ್ನಲೆಯಲ್ಲಿ ಅವರನ್ನು ಹಾಗೂ ಕೆಲ ಸಚಿವರನ್ನು ಸಂಪುಟದಿಂದ ಕೈಬಿಟ್ಟು 6 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇತ್ತು. ಆದರೆ ಉಪ ಚುನಾವಣೆಗಳು ಘೋಷಣೆಯಾದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್​​​ ಗ್ರೀನ್​​ ಸಿಗ್ನಲ್​​ ನೀಡುವುದಿಲ್ಲ. ಹೀಗಾಗಿ ಉಪಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಎನ್ನಲಾಗಿದೆ. ಇದರಿಂದ ಸಚಿವಾಕಾಂಕ್ಷಿಗಳಿಗೆ ಮತ್ತಷ್ಟು ನಿರಾಸೆಯಾಗಿದೆ.

ವಿಧಾನ ಸಭೆ ಅಧಿವೇಶನಕ್ಕೂ ಮುನ್ನ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದರು. ಒಂದೆರಡು ದಿನಗಳಲ್ಲಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಲಿದೆ ಎಂಬ ವಿಶ್ವಾಸವಿತ್ತು. ಆದರೆ ಎರಡು ವಾರ ಕಳೆದರು ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಾರದ ಹಿನ್ನಲೆಯಲ್ಲಿ ಮತ್ತೊಮ್ಮೆ ದೆಹಲಿಗೆ ತೆರಳುವುದಾಗಿ ನಿನ್ನೆಯಷ್ಟೆ ಸುದ್ದಿಗೋಷ್ಠಿಯಲ್ಲಿ ಸಿಎಂ ತಿಳಿಸಿದ್ದರು.

SCROLL FOR NEXT