ರಾಜಕೀಯ

ಬಿಜೆಪಿಯ ಮಹತ್ವದ ಸಭೆಗಳಿಗೆ ವೇದಿಕೆಯಾಗಲಿದೆ ಒಕ್ಕಲಿಗರ ಪ್ರಬಲ ಕ್ಷೇತ್ರ ಹಾಸನ!

Shilpa D

ಬೆಂಗಳೂರು:  ಬಿಜೆಪಿ ಕಾರ್ಯಕಾರಿ ಸಮಿತಿ ಹಾಗೂ ಬಿಜೆಪಿ ಕೋರ್ ಕಮಿಟಿ ಸಭೆಗಳು ಒಕ್ಕಲಿಗ ಸಮುದಾಯದ ಪ್ರಬಲ ಕ್ಷೇತ್ರವಾಗಿರುವ ಹಾಸನದಲ್ಲಿ ನಡೆಯಲಿವೆ.

ಏಪ್ರಿಲ್ 18 ರಂದು ಹಾಸನದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೋವಿಡ್ ಪರಿಸ್ಥಿತಿಯಿಂದಾಗಿ ಎರಡೂ ಸಭೆಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

ರಾಜ್ಯ ಕಾರ್ಯಕಾರಿಣಿಯಲ್ಲಿ, ಮೂಲತಃ ಸುಮಾರು 330 ಕ್ಕೂ ಹೆಚ್ಚು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಬೇಕಾಗಿದ್ದರೂ, ಅದನ್ನು ಕೇವಲ 180 ಕ್ಕೆ ಇಳಿಸಲಾಗಿದೆ.

ಬಿಜೆಪಿ ಬೆಂಬಲದೊಂದಿಗೆ ಇತ್ತೀಚೆಗೆ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಿಜೆಪಿ ಕಾರ್ಯಕಾರಿಣಿ ಕಾರ್ಯಾಗಾರಗಳನ್ನು ನಡೆಸಬಹುದು ಮತ್ತು ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ. 

ಈ ಮೊದಲು ಕಲಬುರಗಿಯಲ್ಲಿಏಪ್ರಿಲ್ 19 ರಂದು  ಬಿಜೆಪಿ ಕಾರ್ಯಕಾರಿಣಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾಗೂ ಚುನಾವಣಾಣ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಈ ಯೋಜನೆ ರದ್ದಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಸಭೆ ನಡೆಸಲು ನಿರ್ಧರಿಸಿದ್ದರು, ಆದರೆ ಈ ಬಾರಿ ಹಾಸನದಲ್ಲಿ ನಡಸಲು ತೀರ್ಮಾನಿಸಲಾಯಿತು. ಈಗಾಗಲೇ ಮಂಗಳೂರು, ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಸಭೆ ನಡೆಸಲಾಗಿದೆ.

ಪಕ್ಷದ ಪದಾಧಿಕಾರಿಗಳು, ಬಿಜೆಪಿ ಮೋರ್ಚಾ ಪ್ರತಿನಿಧಿಗಳು, ವಿಭಾಗೀಯ ಮುಖ್ಯಸ್ಥರು ಮತ್ತು ಕೋರ್ ಕಮಿಟಿ ಸದಸ್ಯರು ಸಭೆಯ ಭಾಗವಾಗಲಿದ್ದಾರೆ ಎಂದು ಪಕ್ಷದ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

SCROLL FOR NEXT