ರಾಜಕೀಯ

ಬೆಳಗಾವಿ ಪ್ರವಾಸದಲ್ಲಿ ದೇವೇಂದ್ರ ಫಡ್ನವೀಸ್: ಶಿವಸೇನೆ ವಿರುದ್ಧ ವಾಗ್ದಾಳಿ

Manjula VN

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಕೊನೆ ಕ್ಷಣದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಪ್ರಚಾರ ನಡೆಸಿದರು. ಈ ವೇಳೆ ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದರು. 

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಂಇಎಸ್ ಬೆಂಬಲದಿಂದ ಬಿಜೆಪಿಯನ್ನು ಗುರಿ ಮಾಡುತ್ತಿರುವ ಶಿವಸೇನೆಗೆ ಮರಾಠಿ ಜನರು ತಕ್ಕ ಪಾಠ ಕಲಿಸಬೇಕೆಂದು ಹೇಳಿದ್ದಾರೆ. 

ಸಂಜಯ ರಾವತ್‌ ಸೇರಿದಂತೆ ಶಿವಸೇನೆ ನಾಯಕರು ಎಂಇಎಸ್‌ ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿಗೆ ಗುಂಡು ಹಾರಿಸಲು ಬೆಳಗಾವಿಗೆ ಬಂದಿದ್ದಾರೆ. ಮಹಾರಾಷ್ಟ್ರದಲ್ಲಿಇರುವುದು ಬಾಳಾಸಾಹೇಬ ಠಾಕ್ರೆ ಕಟ್ಟಿ ಬೆಳೆಸಿದ ಶಿವಸೇನೆಯಲ್ಲ, ಕಾಂಗ್ರೆಸ್‌ನ ಶಿವಸೇನೆ. ರಾಜಕೀಯ ಹಿತಾಸಕ್ತಿಗಾಗಿ ಪಕ್ಷದ ಸಿದ್ಧಾಂತವನ್ನೇ ಶಿವಸೇನೆ ಬಲಿಕೊಡುತ್ತಿದೆ.

ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿ ಶಿವಸೇನೆ ಸರಕಾರ ರಚನೆ ಮಾಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರಕಾರ ಅಝಾನ್ ಸ್ಪರ್ಧೆ ಆಯೋಜಿಸಿದೆ. ಉರ್ದು ಕ್ಯಾಲೆಂಡರ್‌ ತಯಾರಿಸಿ ಬಾಳಾಸಾಹೇಬ ಠಾಕ್ರೆ ಅವರನ್ನು 'ಜನಾಬ್‌ ಠಾಕ್ರೆ' ಎಂದು ಬಿಂಬಿಸುತ್ತಿದ್ದಾರೆ. ಹಿಂದೂ ರಾಜ್ಯದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್‌, ಶಿವಸೇನೆ ಬೇಕಾ ಎನ್ನುವುದನ್ನು ಮರಾಠಿಗರು ನಿರ್ಧರಿಸಬೇಕು ಎಂದು ತಿಳಿಸಿದರು. 

ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರು ಅಮಾಯಕರೇ ಹೊರತು ಮೂರ್ಖರಲ್ಲ. ಈ ಉಪಚುನಾವಣೆಯಲ್ಲಿ ಎಂಇಎಸ್ ಹಾಗೂ ಸಂಜಯ್ ರಾವತ್‍ಗೆ ಮರಾಠಿ ಭಾಷಿಕ ಮತದಾರರು ತಕ್ಕ ಪಾಠ ಕಲಿಸುತ್ತಾರೆ.

ಮಹಾರಾಷ್ಟ್ರದಲ್ಲಿ ಕೊರೋನ ಸೋಂಕಿತ ರೋಗಿಗಳು ಆಕ್ಸಿಜನ್, ಬೆಡ್ ಇಲ್ಲದೇ ಸಾಯುತ್ತಿದ್ದಾರೆ. ಅಧಿಕಾರದಲ್ಲಿರುವ ಶಿವಸೇನೆ ನೇತೃತ್ವದ ಸರಕಾರ ಅಲ್ಲಿನ ಮರಾಠಿ ಭಾಷಿಕರ ಮೇಲೆ ಕಾಳಜಿ ತೋರಿಸುತ್ತಿಲ್ಲ. ಇನ್ನು ಬೆಳಗಾವಿ ಜಿಲ್ಲೆಯಲ್ಲಿರುವ ಮರಾಠಿ ಭಾಷಿಕರ ಮೇಲೆ ತೋರಿಸುತ್ತಿರುವುದು ನಕಲಿ ಪ್ರೀತಿ. ಛತ್ರಪತಿ ಶಿವಾಜಿ ಮಹಾರಾಜರ ತತ್ವದಡಿ ಪ್ರಧಾನಿ ಮೋದಿ ಆಡಳಿತ ನಡೆಸುತ್ತಿದ್ದಾರೆ. ಅವರ ಕೈ ಬಲಪಡಿಸಲು ಮಂಗಳಾ ಸುರೇಶ್ ಅಂಗಡಿಗೆ ನಿಮ್ಮ ಮತ ನೀಡಿ ಎಂದು ಅವರು ಮನವಿ ಮಾಡಿದರು.

SCROLL FOR NEXT