ರಾಜಕೀಯ

ರಾಜ್ಯಪಾಲರ ಸರ್ವಪಕ್ಷ ಸಭೆ: ಕಾಂಗ್ರೆಸ್, ಬಿಜೆಪಿ ನಡುವೆ ವಾಕ್ಸಮರ

Manjula VN

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ತೀವ್ರ ಸ್ವರೂಪದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಮಂಗಳವಾರ ನಡೆಸಿದ ಸರ್ವಪಕ್ಷ ಸಭೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. 

ರಾಜ್ಯಪಾಲರು ನಡೆಸಿದ್ದ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್, ಜೆಡಿಎಸ್ ನಾಯಕ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. 

ಸರ್ವಪಕ್ಷ ಸಭೆ ಮುಕ್ತಾಯಗೊಂಡ ಬಳಿಕ ಕಾಂಗ್ರೆಸ್ ತಕರಾರು ಎತ್ತಿದೆ. ಸಭೆ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಜ್ಯಪಾಲರು ಈ ರೀತಿಯ ಸಭೆ ಕರೆದಿರುವುದು ಇದೇ ಮೊದಲು. ಮುಂದಿನ ದಿನಗಳಲ್ಲಿ ರಾಜ್ಯಪಾಲರ ಆಡಳಿತ ಹೇರಲಾಗುತ್ತದೆ ಎಂಬುದನ್ನು ಇದು ಸೂಚಿಸುತ್ತಿದೆ ಎಂದು ಹೇಳಿದ್ದಾರೆ. 

ಕರ್ನಾಟಕ ಪಾಂಡಿಚೆರಿ, ದೆಹಲಿ ರೀತಿ ಕೇಂದ್ರಾಡಳಿತ ಪ್ರದೇಶವಲ್ಲ. ಕೊರೋನಾ ಪರಿಸ್ಥಿತಿ ಕುರಿತು ರಾಜ್ಯಪಾಲರು ರಾಜ್ಯ ಸರ್ಕಾರದಿಂದ ಮಾಹಿತಿ ಪಡೆಯಬಹುದಿತ್ತು. ಯಾವ ಕಾನೂನಿನ ಅಡಿಯಲ್ಲಿ ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದರು ಎಂಬುದು ನಮಗೆ ತಿಳಿಯುತ್ತಿಲ್ಲ. ನಮ್ಮ ರಾಜ್ಯದಲ್ಲಿ ಚುನಾಯಿತ ಸರ್ಕಾರವಿದೆ ಎಂದು ತಿಳಿಸಿದ್ದಾರೆ. 

ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯಪಾಲರ ಸಭೆಯು ರಾಜ್ಯದಲ್ಲಿನ ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಇದೀಗ ಜನರಿಗೆ ಸರ್ಕಾರ ಎಲ್ಲವನ್ನೂ ಸ್ಪಷ್ಟಪಡಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಜನರಲ್ಲಿ ವಿಶ್ವಾಸ ತುಂಬಬೇಕಿದೆ. ಕೊರೋನಾ ರೋಗಿಗಳ ಸಾವಿನ ಕುರಿತು ಸರ್ಕಾರ ಆಡಿಟ್ ನಡೆಸಬೇಕು ಎಂದಿದ್ದಾರೆ. 

ಇದಲ್ಲದೆ ಸರ್ವಪಕ್ಷ ಸಭೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿಯೂ ಕಾಂಗ್ರೆಸ್ ಟೀಕೆ ಮಾಡಿದೆ. ರಾಜ್ಯಪಾಲರು ಸರ್ವಪಕ್ಷ ಸಭೆ ಕರೆದಿರುವುದು ಏನು ಸೂಚಿಸುತ್ತದೆ? ರಾಜ್ಯದಲ್ಲಿ ಚುನಾಯಿತ ಸರ್ಕಾರವಿಲ್ಲವೇ? ಸರ್ಕಾರದ ಅಸಮರ್ಥ್ಯವೇ ಅಥವಾ ಬಿಎಸ್'ವೈ ಮುಕ್ತ ಬಿಜೆಪಿ ಅಭಿಯಾನದ ಭಾಗವೇ? ಸರ್ಕಾರಕ್ಕೆ ವಿಪಕ್ಷಗಳನ್ನು ಎದುರಿಸುವ ಮುಖವಿಲ್ಲವೇ? ಅಥವಾ ಪರಿಸ್ಥಿತಿ ಎದುರಿಸಲಾಗದೆ ಕೈ ಚೆಲ್ಲಿದೆಯೇ? ಇಂತಹ ಮುಖಹೇಡಿ ಸರ್ಕಾರದಿಂದ ಜನರ ಜೀವ ಉಳಿಸುವುದು ಸಾಧ್ಯವಿಲ್ಲ ಎಂದು ರಾಜ್ಯಪಾಲರ ಸರ್ವಪಕ್ಷಗಳ ಸಭೆ ಕುರಿತು ಕಾಂಗ್ರೆಸ್ ತಕರಾರು ಎತ್ತಿದೆ. 

ಕಾಂಗ್ರೆಸ್ ಟೀಕೆಗಳಿಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ತಿರುಗೇಟು ನೀಡಿದ್ದಾರೆ. ಪರಿಸ್ಥಿತಿ ಕುರಿತು ಡಿ.ಕೆ.ಶಿವಕುಮಾರ್ ಅವರು ರಾಜಕೀಯ ಮಾಡಬಾರದು. ರಾಜ್ಯಪಾಲರ ಸಭೆಯನ್ನು ರಾಜ್ಯಪಾಲರ ಆಡಳಿತದೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಪ್ರಧಾನಮಂತ್ರಿಗಳು ಈಗಾಗಲೇ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದ್ದಾರೆ. ಇಂತಹ ಸಭೆಗಳು ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲೂ ನಡೆದಿವೆ ಎಂದಿದ್ದಾರೆ. 

SCROLL FOR NEXT