ರಾಜಕೀಯ

ಮುಖ್ಯಮಂತ್ರಿಗಳಿಗೆ ಪಾಠ ಮಾಡಲು ನೀವು ಹೆಡ್ ಮಾಸ್ಟರ್ ಅಲ್ಲ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Sumana Upadhyaya

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದಲ್ಲಿ ಕೊರೋನಾ ರಣಕೇಕೆ ಮುಂದುವರಿದಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ, ಆಕ್ಸಿಜನ್ ಕೊರತೆಯುಂಟಾಗಿದೆ, ಬೆಡ್ ಸಮಸ್ಯೆ ಬಗ್ಗೆ ಸಾಕಷ್ಟು ಸುದ್ದಿಗಳು ಬರುತ್ತಿವೆ. ಇನ್ನು ಚಿಕಿತ್ಸೆ ಸರಿಯಾಗಿ ಸಿಗದೆ ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಬೆಂಗಳೂರು ಮಹಾನಗರದಲ್ಲಿ ಮೃತರ ಶವಸಂಸ್ಕಾರಕ್ಕೆ ಸಹ ಸಮಸ್ಯೆಯುಂಟಾಗಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಸೇರಿದಂತೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಜನಸಾಮಾನ್ಯರಿಂದ, ವಿರೋಧ ಪಕ್ಷದ ನಾಯಕರಿಂದಲೂ ಕೇಳಿಬರುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಾವುದೇ ಉದ್ದೇಶವಿಲ್ಲದೆ ಟಿವಿಯಲ್ಲಿ ಆಗಾಗ ಬರುತ್ತಿದ್ದರೆ ವೈರಸ್ ಕೊನೆಯಾಗುವುದಿಲ್ಲ, ಮುಖ್ಯಮಂತ್ರಿಗಳಿಗೆ ಪಾಠ ಮಾಡಲು ನೀವು ಶಾಲೆಯ ಹೆಡ್ ಮಾಸ್ಟರ್ ಅಲ್ಲ, ಮೊದಲು ನೀವು ರಾಜ್ಯ ಸರ್ಕಾರಗಳು ಮಾಡುವ ಮನವಿಗಳನ್ನು ಜವಾಬ್ದಾರಿಯುತವಾಗಿ ಈಡೇರಿಸಲು ನೋಡಿ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ತಿವಿದಿದ್ದಾರೆ. 

ಇನ್ನು ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿಯವರು ಕಳೆದ ಜನವರಿಯಲ್ಲಿ ಮಾಡಿದ್ದ ಭಾಷಣದ ವಿಡಿಯೊವೊಂದನ್ನು ಟ್ವೀಟ್ ಮಾಡಿ ಟೀಕಿಸಿದೆ. ಅದರಲ್ಲಿ ಪ್ರಧಾನಿಯವರು ಭಾರತದಲ್ಲಿ ಕೊರೋನಾ ಗಣನೀಯವಾಗಿ ಇಳಿಕೆಯಾಗಿದೆ, ವಿಶ್ವದಲ್ಲಿಯೇ ಭಾರತ ಕೊರೋನಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಿದೆ ಎಂದಿದ್ದರು. ಇದೀಗ ಕೊರೋನಾ ಎರಡನೇ ಅಲೆ ದೇಶಾದ್ಯಂತ ತಾಂಡವವಾಡುತ್ತಿದೆ, ಅನೇಕರ ಜೀವನವನ್ನು ಬಲಿ ತೆಗೆದುಕೊಂಡಿದೆ. ಮೋದಿಯವರು ಮ್ಯಾಜಿಕ್ ಮಾಡಿಬಿಟ್ಟವರಂತೆ ಮಾತನಾಡುತ್ತಾರೆ ಎಂದು ಟೀಕಿಸಿದೆ.

SCROLL FOR NEXT