ರಾಜಕೀಯ

ಪೋಲಿಯೋ ಲಸಿಕೆ ಮಾದರಿಯಲ್ಲಿ ಮನೆಮನೆಗೆ ಹೋಗಿ ಕೋವಿಡ್ ಲಸಿಕೆ ನೀಡಿ: ಡಿಕೆಶಿ ಆಗ್ರಹ

Lingaraj Badiger

ಬೆಂಗಳೂರು: ಪೋಲಿಯೋ ಲಸಿಕೆ ಮಾದರಿಯಲ್ಲಿ ಸರ್ಕಾರ ಮನೆಮನೆಗೆ ಹೋಗಿ ರಾಜ್ಯದ ಜನರಿಗೆ ಕೋವಿಡ್ ಲಸಿಕೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಕೋವಿಡ್ ಲಸಿಕೆ ಪಡೆಯಲು ವೆಬ್ ಫೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಸರ್ಕಾರ ಹೇಳುತ್ತಿದೆಯಾದರೂ ಹಳ್ಳಿಯ ಜನರು ಹೇಗೆ ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಪಕ್ಕದ ಆಂದ್ರದಲ್ಲಿ ಮನೆಮನೆಗೆ ಹೋಗಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಗಡಿಭಾಗದ ಜನರು ಸಹ ಇದನ್ನೇ ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ಸಹ ಪೋಲಿಯೋ ಲಸಿಕೆ ತರಹ ಮನೆಮನೆಗೆ ಹೋಗಿ ಲಸಿಕೆ ಕೊಡಬೇಕೆಂಬುದು ಕಾಂಗ್ರೆಸ್ ಪಕ್ಷದ ಆಗ್ರಹವಾಗಿದೆ ಎಂದರು.

ಕೊರೋನಾ ವಿಚಾರದಲ್ಲಿ ಜನರಿಗೆ ಕಾಂಗ್ರೆಸ್ ಹೇಗೆ ಸಹಾಯ‌ ಮಾಡಬಹುದು? ಮೃತಪಟ್ಟವರಿಗೆ ಹೇಗೆ ಸಹಾಯ ಮಾಡಬಹುದು? ಎಂಬ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿದ್ದೇವೆ. ಈಗಾಗಲೇ ಟ್ರಯಲ್ ರನ್ ಮಾಡುತ್ತಿದ್ದೇವೆ. ನೂರು ಜನರಿಗೆ ನೋಂದಣಿ ಮಾಡಿಸಿ, ಮುನ್ನೂರಕ್ಕೂ ಹೆಚ್ಚು ಜನರಿಗೆ ಜೌಷಧ ಸಹಾಯ ಮಾಡಿದ್ದೇವೆ. ಇದೇ ರೀತಿ ಜಿಲ್ಲೆಯಲ್ಲಿ ಸಹಾಯ‌ಮಾಡಲು ಕಾರ್ಯಕರ್ತರಿಗೆ ಹೇಳಿದ್ದೇವೆ. ಆದಷ್ಟೂ ಬೇಗ ಕಾರ್ಯರೂಪಕ್ಕೆ ತರುತ್ತೇವೆ ಎಂದರು.

ದೊಡ್ಡ ಆಸ್ಪತ್ರೆಗೆ ಮಾತ್ರ ಕೊರೋನಾ ಕೇಸ್ ವಿಚಾರವಾಗಿ ದುಡ್ಡು ಕೊಡುತ್ತಿದ್ದಾರೆ. ಚಿಕ್ಕ ಆಸ್ಪತ್ರೆಗಳಿಗೆ ಹಣ ಬಿಡುಗಡೆ ‌ಮಾಡಿಲ್ಲ. ಅವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿಬ್ಬಂದಿಗೆ ಸಂಬಳ ಕೊಡಲು ಸರ್ಕಾರದಲ್ಲಿ ದುಡ್ಡಿಲ್ಲ. ಆಕ್ಸಿಜನ್, ರೆಮಿಡಿಸಿವಿಯರ್ ಕೊಡುತ್ತಿಲ್ಲ. ಎಲ್ಲಿ ತಮ್ಮನ್ನು ಗುರಿಯಾಗಿಸಿಬಿಡುತ್ತಾರೋ ಎಂಬ ಭಯದಲ್ಲಿ ಈ ಸರ್ಕಾರದ ಬಳಿ ಸಂಕಷ್ಟ ಹೇಳುವುದುಕ್ಕೂ ಆಸ್ಪತ್ರೆಯವರು ಹೆದರುತ್ತಿದ್ದಾರೆ. ಹೀಗಾಗಿ ಇಂತಹ ಆಸ್ಪತ್ರೆಗಳ ಪಟ್ಟಿ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದು, ಪಟ್ಟಿ ಪಡೆದು ಅದನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಡಿಕೆಶಿ ಹೇಳಿದರು.

SCROLL FOR NEXT