ರಾಜಕೀಯ

ವಾಜಪೇಯಿಯನ್ನು ಸವಕಲು ನಾಣ್ಯವೆಂದು ಅನಾಥರನ್ನಾಗಿಸಿದ ಬಿಜೆಪಿ: ಪಕ್ಷ ಕಟ್ಟಿದ ಅಡ್ವಾಣಿ ಬೆನ್ನಿಗೆ ಚೂರಿ ಹಾಕಿದ ಮೀರ್‌ ಸಾದಿಕ್‌ ಮೋದಿ!

Shilpa D

ಬೆಂಗಳೂರು: ಬಿಜೆಪಿ ಕೇಂದ್ರ ನಾಯಕರ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹರಿಹಾಯ್ದಿದೆ, ಹಿರಿಯರನ್ನು ಒದ್ದೋಡಿಸುವುದೇ ಬಿಜೆಪಿ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕೆಪಿಸಿಸಿ, ಪಕ್ಷ ಕಟ್ಟಿದ ಅಡ್ವಾಣಿ ಬೆನ್ನಿಗೆ ಚೂರಿ ಹಾಕಿದ ಮೀರ್‌ ಸಾದಿಕ್‌ ಮೋದಿ ದಾರಿಗೆ ಅಡ್ಡ ಬರುವ ಹಿರಿಯರೆಲ್ಲರನ್ನ ಷಡ್ಯಂತ್ರ ರೂಪಿಸಿ ಮೂಲೆಗುಂಪು ಮಾಡಿದರು. ಈಗ ಬಿಎಸ್ ಯಡಿಯೂರಪ್ಪ ಸರದಿ, ಮೋದಿ ಭಿಕ್ಷೆ ಬೇಡುವ ಸಮಯದಲ್ಲಿ ಚುನಾವಣೆ ಗೆದ್ದಿದ್ದ ಯಡಿಯೂರಪ್ಪ ಅವರನ್ನೇ ಮನೆಯಲ್ಲಿ ಕೂರಿಸಲು ತಯಾರಾದರು.

ನಿಮ್ಮ ಮೀರ್‌ ಸಾದಿಕ್‌ ಮೋದಿ ನಿಮ್ಮದೇ ಪಕ್ಷದ ಹಿರಿಯರನ್ನ ಅವಮಾನಿಸಿ ಮೂಲೆಗುಂಪು ಮಾಡಿದ ಪಟ್ಟಿ ದೊಡ್ಡದಿದೆ, ಒಮ್ಮೆಯೂ ಸಂಸದರಾಗಿ ಅನುಭವವಿಲ್ಲದೆ, ಕೇಂದ್ರ ಮಂತ್ರಿಯಾಗಿ ಕೆಲಸ ಮಾಡದೆ, ದೇಶದ ಅಳ ಅಗಲ ತಿಳಿಯದೆ ಸಂಸತ್ತಿನ ಮೆಟ್ಟಿಲನ್ನೇ ನೋಡದ ಮೋದಿ ಏಕಾಏಕಿ ಪ್ರಧಾನಿ ಆಗಿದ್ದು ಹಿರಿಯರನ್ನು ತುಳಿದೇ ಅಲ್ಲವೇ ಎಂದು ಪ್ರಶ್ನಿಸಿದೆ.

ವಾಜಪೇಯಿ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಹಿರಿಯ ನಾಯಕ ಜೆಟ್ಮಲಾನಿಯವರನ್ನ ತನ್ನ ಪ್ರಧಾನಿ ಹುದ್ದೆಯ ಬಳಸಿ ಬಿಸಾಡಿದ್ದು ಮೀರ್ ಸಾದಿಕ್ ಮೋದಿ ಎಂದಿದೆ. ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿ ಡಿಜಿಟಲ್ ಕ್ಯಾಮೆರಾದಲ್ಲಿ ಫೋಟೋ ತೆಗೆಯುವ ಹೊತ್ತಿಗಾಗಲೇ ಅರುಣ್ ಶೌರಿ, ಜಸ್ವಂತ್ ಸಿಂಗ್ ಸಂಸತ್ತಿನಲ್ಲಿದ್ದರು!  ಒಕ್ಕೂಟ ಸರ್ಕಾರದಲ್ಲಿ ಯಾವುದೇ ಹುದ್ದೆ ನಿಭಾಯಿಸಿದ ಅನುಭವ ಪಡೆಯದೆ ಪ್ರಧಾನಿಯಾಗುವ ಆಸೆಗೆ ಅವರಿಬ್ಬರ ಬೆನ್ನಿಗೆ ಚೂರಿ ಹಾಕಿದ್ದೇ ಮೀರ್‌ ಸಾದಿಕ್‌ ಮೋದಿ ಲೇವಡಿ ಮಾಡಿದೆ.

ಅಡ್ವಾಣಿ, ವಾಜಪೇಯಿಯವರ ಒಡನಾಡಿ, ಹಿರಿಯ ಯಶವಂತ್ ಸಿನ್ಹಾರನ್ನು ತಮ್ಮ ಏಕಸ್ವಾಮ್ಯತೆಗೆ ಧಕ್ಕೆ ತರಬಲ್ಲರು ಎಂಬ ಒಂದೇ ಕಾರಣಕ್ಕೆ ಮೀರ್‌ ಸಾದಿಕ್‌ ಮೋದಿ ವ್ಯವಸ್ಥಿತವಾಗಿ ಹತ್ತಿಕ್ಕಿದ್ದು ದೇಶ ಕಂಡಿದೆ. ಬಿಜೆಪಿಯಲ್ಲಿ ಹಿರಿಯರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಕನಸಿನ ಮಾತು.

ಪಕ್ಷವನ್ನು ಅಧಿಕಾರಕ್ಕೆ ತರಲಾಗದ ವಾಜಪೇಯಿಯವರನ್ನು ಸವಕಲು ನಾಣ್ಯವೆಂದು ಅನಾಥರನ್ನಾಗಿಸಿದ ಬಿಜೆಪಿ ಓಡಬಲ್ಲ ಕುದುರೆಗಷ್ಟೇ ಮಣೆ ಹಾಕುತ್ತದೆ. ಅನಾರೋಗ್ಯದಿಂದ ಅನಾಥರಂತೆ ಕೊನೆಯ ದಿನಗಳನ್ನು ಕಳೆದ ವಾಜಪೇಯಿಯವರನ್ನ ಬಿಜೆಪಿ ನಡೆಸಿಕೊಂಡ ರೀತಿ ಜಗತ್ತು ಕಂಡಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

SCROLL FOR NEXT