ರಾಜಕೀಯ

ದೆಹಲಿ ಯಾತ್ರೆ ಮುಗಿಸಿ ಬೆಂಗಳೂರಿಗೆ ಬಂದಿಳಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಕಟಿಸಲಿದ್ದಾರೆಯೇ ನೂತನ ಸಚಿವರ ಪಟ್ಟಿ?

Sumana Upadhyaya

ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟಕ್ಕೆ ಸೇರ್ಪಡೆಯಾಗುವ ಸಚಿವರ ಪಟ್ಟಿಯನ್ನು ದೆಹಲಿಯಿಂದ ಹೊತ್ತು ತಂದು ಬೆಂಗಳೂರಿಗೆ ಬಂದಿಳಿದಿದ್ದಾರೆ. ಅವರು ಅಲ್ಲಿಂದ ನೇರವಾಗಿ ವಿಧಾನ ಸೌಧಕ್ಕೆ ಆಗಮಿಸುತ್ತಿದ್ದು ಶಕ್ತಿಕೇಂದ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೆಲವೇ ಹೊತ್ತಿನಲ್ಲಿ ನೂತನ ಸಚಿವರು ಯಾರ್ಯಾರು ಆಗಲಿದ್ದಾರೆ ಎಂದು ಅವರು ಪ್ರಕಟಿಸುವ ನಿರೀಕ್ಷೆಯಿದೆ. 

ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜಧಾನಿ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಶಕ್ತಿಕೇಂದ್ರ ವಿಧಾನ ಸೌಧ ಮತ್ತು ಇಂದು ಅಪರಾಹ್ನ ನಡೆಯಲಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅವರ ಜೊತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಜೊತೆಗಿದ್ದಾರೆ. 

ಇಂದು ಬೆಳಗ್ಗೆ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬಸವರಾಜ ಬೊಮ್ಮಾಯಿಯವರು ನೂತನ ಸಚಿವರ ಪಟ್ಟಿ ಪ್ರಕಟಿಸಲಿದ್ದಾರೆ. ಇನ್ನು ಸಂಪುಟಕ್ಕೆ ಮಾಜಿ ಸಚಿವರುಗಳಾದ ಎಂಟಿಬಿ ನಾಗರಾಜ್, ಶ್ರೀರಾಮುಲು, ಬಿ ಸಿ ಪಾಟೀಲ್ ಮೊದಲಾದವರು ಸೇರುವುದು ಬಹುತೇಕ ಖಚಿತವಾಗಿದೆ.

ವಿಜಯೇಂದ್ರಗೂ ಮಂತ್ರಿಗಿರಿ?: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರಗೂ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಲಿದೆಯೇ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಇಂದು ಬೆಳಗ್ಗೆ ಯಡಿಯೂರಪ್ಪನವರ ನಿವಾಸ ಕಾವೇರಿಗೆ ಆಗಮಿಸಿರುವ ವಿಜಯೇಂದ್ರ ತಮ್ಮ ತಂದೆಯ ಜೊತೆ ಮಾತುಕತೆಯಲ್ಲಿ ನಿರತವಾಗಿದ್ದಾರೆ.

ಈ ಬಾರಿ ಇಲ್ಲ ಡಿಸಿಎಂ ಹುದ್ದೆ?: ಆರಂಭದಲ್ಲಿ ನೂತನ ಸಂಪುಟದಲ್ಲಿ 3-4 ಮಂದಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ಹೇಳಲಾಗುತ್ತಿದ್ದರೂ ಡಿಸಿಎಂ ಹುದ್ದೆಗೆ ಹೆಚ್ಚಿನ ಒತ್ತಡ ಮತ್ತು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಸದ್ಯಕ್ಕೆ ಡಿಸಿಎಂ ಹುದ್ದೆ ಬೇಡ ಎಂದು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಒಂದು ವೇಳೆ ಬೇಕು ಎಂದಾದರೆ ಸಚಿವ ಸಂಪುಟ ರಚನೆಯ ಬಳಿಕ ತೀರ್ಮಾನಿಸಬಹುದು ಎಂದು ವರಿಷ್ಠರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಜಿಲ್ಲೆಗಳಲ್ಲಿ ಗರಿಗೆದರಿದ ಚಟುವಟಿಕೆ: ನವಲಗುಂದ ಶಾಸಕ ಶಂಕರ್ ಪಾಟೀಲ್ ಮುಣೇನಕೊಪ್ಪ  ಅವರಿಗೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದು ಇವರು ಕಳಸ-ಬಂಡೂರಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಬಂಡಾಯ ಬಾವುಟ: ಬಳ್ಳಾರಿಯ ರೆಡ್ಡಿ ಸೋದರರು, ಧಾರವಾಡದ ಶಾಸಕ ಅರವಿಂದ್ ಬೆಲ್ಲದ್, ಕಾರವಾರ ಶಾಸಕಿ ರೂಪಾಲಿ ನಾಯಕ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇನ್ನು ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡುವ ಬೆದರಿಕೆಯನ್ನು ಹೊಸಪೇಟೆಯ ಶಾಸಕ ಆನಂದ್ ಸಿಂಗ್, ನೆಹರೂ ಓಳೇಕಾರ್, ಆನಂದ್ ಮಾಮನಿ ಮೊದಲಾದವರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಶಾಸಕರಲ್ಲಿ ಇಂದಿನ ಸಚಿವ ಸಂಪುಟ ರಚನೆ ಬಗ್ಗೆ ಕಾತರ ಮೂಡಿದೆ. ಸಿಎಂ ಕರೆಗೆ ಕಾಯುತ್ತಿದ್ದಾರೆ.

ಇನ್ನು ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಹೀರೆಕೆರೂರು ಶಾಸಕ ಬಿ ಸಿ ಪಾಟೀಲ್ ಅವರಿಗೆ ಈ ಬಾರಿ ಕೂಡ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು ಅವರ ಅಭಿಮಾನಿಗಳು, ಕ್ಷೇತ್ರದ ಕಾರ್ಯಕರ್ತರು ಬೆಂಗಳೂರಿಗೆ ಆಗಮಿಸಿದ್ದಾರೆ. 

ಕೆ ಎಸ್ ಈಶ್ವರಪ್ಪ, ಡಾ ಕೆ ಸುಧಾಕರ್, ಮುರುಗೇಶ್ ನಿರಾಣಿ, ಎಸ್ ಟಿ ಸೋಮಶೇಖರ್ ಮೊದಲಾದವರಿಗೆ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಕರೆ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ.

SCROLL FOR NEXT