ಬೆಂಗಳೂರು: ಕಾಂಗ್ಸೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಇಡಿ ದಾಳಿಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೆಪ ಮಾತ್ರಕ್ಕೆ ಖಂಡಿಸುತ್ತಿದ್ದಾರೆಂದು ರಾಜ್ಯ ಬಿಜೆಪಿ ಶುಕ್ರವಾರ ಹೇಳಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಕಿಡಿಕಾರಿದೆ.
ನೂರಾರು ಕೋಟಿ ಲೂಟಿ ಹೊಡೆದು ಅಕ್ರಮ ಸಂಪತ್ತು ಗಳಿಸಿರುವ ಜಮೀರ್ ಈಗ ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದಿರುವುದು ಯಾರಿಗೆ ಲಾಭ ತರಬಹುದೆಂಬುದಕ್ಕೆ ಉತ್ತರ ಲಭಿಸಿದೆ. ಮುಂದಿನ ಚುನಾವಣೆಗಾಗಿ ಸುರಕ್ಷಿತ ಕ್ಷೇತ್ರ ಅರಸುತ್ತಿರುವ ಸಿದ್ದರಾಮಯ್ಯ ಅವರೇ ಇದರ ಸಂಪೂರ್ಣ ಫಲಾನುಭವಿಯಾಗಿದ್ದಾರೆ. ನೆಪ ಮಾತ್ರಕ್ಕೆ ಖಂಡಿಸುತ್ತಿದ್ದಾರೆಂದು ಹೇಳಿದೆ.
ಸಿದ್ದರಾಮಯ್ಯ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಕಾಲಿಟ್ಟ ಕ್ಷಣದಲ್ಲೇ, ಪ್ರತಿಪಕ್ಷ ಸ್ಥಾನದಿಂದ ಖರ್ಗೆಯವರನ್ನು ಖಾಲಿ ಮಾಡಿಸಿದರು. ನಂತರ ಸಿಎಂ ರೇಸ್‌ನಲ್ಲಿದ್ದ ದಲಿತ ನಾಯಕನನ್ನು ಸೋಲಿಸಿದರು. ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣು ಹಾಯಿಸಿದ ಕೂಡಲೇ ಜಮೀರ್ ಅಕ್ರಮ ಬೆಳಕಿಗೆ ಬಂದು ಸಂಕಟಕ್ಕೆ ಸಿಲುಕಿಕೊಂಡರು ಎಂದು ತಿಳಿಸಿದೆ.