ರಾಜಕೀಯ

ಆನಂದ್ ಸಿಂಗ್ ನನ್ನ ಸ್ನೇಹಿತ, ಕರೆದು ಮಾತನಾಡುತ್ತೇನೆ: ಸಿಎಂ ಬೊಮ್ಮಾಯಿ 

Sumana Upadhyaya

ಬೆಂಗಳೂರು: ಸಚಿವ ಆನಂದ್ ಸಿಂಗ್ ಅವರ ಅಸಮಾಧಾನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಆನಂದ್ ಸಿಂಗ್ ಅವರು ನನಗೆ ಆತ್ಮೀಯರು, ನನ್ನ ಗೆಳೆಯ ಅವರು, ಹೌದು ಅವರು ಪಕ್ಷದಲ್ಲಿ ಪ್ರಮುಖ ವ್ಯಕ್ತಿ, ಅವರಿಗೆ ಅಸಮಾಧಾನವಾಗಿದ್ದರೆ ಕರೆಸಿ ಮಾತನಾಡುತ್ತೇನೆ ಎಂದಿದ್ದಾರೆ.

ಎಲ್ಲಾ ಸಚಿವರು ತಮಗೆ ಸಿಕ್ಕಿರುವ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗಿ ಕೆಲಸ ಮಾಡಲಿ ಎಂದು ಕೂಡ ಸಿಎಂ ಹೇಳಿದ್ದಾರೆ. ಇಂದು ಖಾತೆ ಹಂಚಿಕೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ಅಸಮಾಧಾನ ಇರುವುದು ನಿಜ, ಅವರೆಲ್ಲರನ್ನೂ ಕರೆಸಿ ಮಾತನಾಡುತ್ತೇನೆ, ನೀಡಿರುವ ಖಾತೆಗಳನ್ನು ಸಚಿವರು ಸರಿಯಾಗಿ ವಹಿಸಿಕೊಂಡು ಹೋಗಲಿ ಎಂದು ಕೂಡ ಕಿವಿಮಾತು ಹೇಳಿದ್ದಾರೆ.

ಇನ್ನು ಸಚಿವ ಸ್ಥಾನದ ಬಗ್ಗೆ ಶ್ರೀರಾಮುಲು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿಯೇ ಶ್ರೀರಾಮುಲು ಅವರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದರು, ಅವರಿಗೆ ಆರೋಗ್ಯ ಸಚಿವ ಖಾತೆ ನೀಡಲಾಗಿತ್ತು, ಆದರೆ ಕೋವಿಡ್ ಒಂದನೇ ಅಲೆಯ ನಂತರ ಅವರ ಖಾತೆ ಬದಲಾವಣೆ ಮಾಡಿ ಸಮಾಜ ಕಲ್ಯಾಣ ಖಾತೆ ನೀಡಲಾಗಿತ್ತು. ನಂತರ ಅವರು ಸರ್ಕಾರದ ಚಟುವಟಿಕೆಯಲ್ಲಿ ನಿಷ್ಕ್ರಿಯವಾಗಿದ್ದರು, ಈ ಸರ್ಕಾರದಲ್ಲಿ ಕೂಡ ಡಿಸಿಎಂ ಹುದ್ದೆ ಅವರಿಗೆ ಸಿಕ್ಕಿಲ್ಲ.  ಅವರಿಗೆ ಸಮಾಜ ಕಲ್ಯಾಣ ಜೊತೆಗೆ ಸಾರಿಗೆ ಇಲಾಖೆ ಖಾತೆ ನೀಡಲಾಗಿದೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿರುವ ಬಗ್ಗೆ ಸಚಿವಾಕಾಂಕ್ಷಿಯಾಗಿದ್ದ ಹಾಸನದ ಶಾಸಕ ಪ್ರೀತಂ ಗೌಡ ಅವರು ಜನತಾ ಪರಿವಾರದವರನ್ನು ಓಲೈಸುವ ಅಗತ್ಯವೇನಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ ಅವರು ಅವರವರ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅವರೆಲ್ಲರ ಬಳಿ ಮಾತನಾಡುತ್ತೇನೆ ಎಂದಷ್ಟೇ ಹೇಳಿದರು.

SCROLL FOR NEXT