ರಾಜಕೀಯ

ಸೇಫ್ ಗೇಮ್ ಪ್ಲೇಯರ್  ಬೊಮ್ಮಾಯಿ: ಹಲವು ಸಚಿವರು ಕಣ್ಣಿಟ್ಟಿದ್ದ ನಗರಾಭಿವೃದ್ಧಿ ತಮ್ಮ ಬಳಿ ಉಳಿಸಿಕೊಂಡ ಸಿಎಂ!

Shilpa D

ಬೆಂಗಳೂರು: ಹಲವು ಸಚಿವರು ಕಣ್ಣಿಟ್ಟಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೂ ಕೊಡದೇ, ಆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಸೇಫ್ ಗೇಮ್ ಆಡಿದ್ದಾರೆ.

ಈ ಮೂಲಕ ಮುಂದೆ ಎದುರಾಗಬಹುದಾಗಿದ್ದ ಸಮಸ್ಯೆಗಳಿಗೆ ಅಂತ್ಯ ಹಾಡಿದ್ದಾರೆ. ಖಾತೆ ಹಂಚಿಕೆ ಮಾಡುವಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಹಿರಿಯ ನಾಯಕರಿಗೆ ಯಡಿಯೂರಪ್ಪ ಅವಧಿಯಲ್ಲಿ ನಿರ್ವಹಿಸಿದ್ದ ಹಳೇಯ ಖಾತೆಗಳನ್ನು ನೀಡಿದ್ದಾರೆ,  ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಡಾ ಸಿಎನ್ ಅಶ್ವಥ್ ನಾರಾಯಣ್ ಅವರಿಗೆ, ಆರ್ ಅಶೋಕ ಅವರಿಗೆ ಕಂದಾಯ ಮತ್ತು ವಿ ಸೋಮಣ್ಣ ಅವರಿಗೆ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ ನೀಡಿದ್ದಾರೆ.

ಅಶ್ವಥ್ ನಾರಾಯಣ್, ಅಶೋಕ, ಸೋಮಣ್ಣ ಮತ್ತು ಸೋಮಶೇಖರ್ ನಗಾರಭಿವೃದ್ಧಿ ಇಲಾಖೆ ಮೇಲೆ ಕಣ್ಣಿಟ್ಟಿದ್ದರು. ವಾಸ್ತವವಾಗಿ ಸೋಮಣ್ಣ ಅವರು ಈ ಮೊದಲು ಸೇವೆ ಸಲ್ಲಿಸಿದ್ದ ಖಾತೆಯಲ್ಲಿಯೇ ಕೆಲಸ ನಿರ್ವಹಿಸಲು ಸಿದ್ಧವಿರುವುದಾಗಿ ಸಾರ್ವಜನಿಕವಾಗಿ ಹೇಳಿದ್ದರು. ಸೋಮಶೇಖರ್ ಕೂಡ ತಮ್ಮ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.

ಬೆಂಗಳೂರು ನಗರಾಭಿವೃದ್ಧಿ ಅತ್ಯಂತ ಬೇಡಿಕೆಯುಳ್ಳ ಖಾತೆಯಾಗಿತ್ತು. ಬೆಂಗಳೂರಿನ 7 ಸಚಿವರಲ್ಲಿ ಯಾರಿಗಾದರೂ ಒಬ್ಬರಿಗೆ ಈ ಖಾತೆ ನೀಡಿದ್ದರೂ ಉಳಿದವರ ಆಕ್ರೋಶಕ್ಕೆ ಸಿಎಂ ಬೊಮ್ಮಾಯಿ ಗುರಿಯಾಗುತ್ತಿದ್ದರು.

ಯಡಿಯೂರಪ್ಪ ಅವಧಿಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು, ಅವರು ಕೂಡ ಇದೇ ಸಂದಿಗ್ಧತೆ ಎದುರಿಸಿದ್ದರು. ಹಾಗಾಗಿ ಸಿಎಂ ಪ್ಲಾನ್ ಮಾಡಿ ನಗಾರಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಬಹು ಬೇಡಿಕೆ ಖಾತೆಯಾಗಿದ್ದ ಹಣಕಾಸು ಇಲಾಖೆಯನ್ನು ಯಾರಿಗೂ ಹಂಚಿಕೆ ಮಾಡದ ಸಿಎಂ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.  ಮುಖ್ಯಮಂತ್ರಿಯಾಗಿ ರಾಜ್ಯ ಮತ್ತು ದೆಹಲಿ ಪ್ರವಾಸ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿಗೆ ನ್ಯಾಯ ಒದಗಿಸಲು ಸಾಧ್ಯವಾಗದಿರಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
 

SCROLL FOR NEXT