ರಾಜಕೀಯ

ಸಿಎಂ ಬೊಮ್ಮಾಯಿ ಸದಾಶಯದಿಂದ ಹೊಣೆಗಾರಿಕೆ ನೀಡಿದರೆ, ಜವಾಬ್ದಾರಿ ಮರೆತ ಸಚಿವರಿಂದ ವಿಜಯೋತ್ಸವ: ಎಚ್ ಡಿಕೆ ತೀವ್ರ ಕಿಡಿ

Srinivasamurthy VN

ಬೆಂಗಳೂರು: ಕೋವಿಡ್ ನಿರ್ವಹಣೆ ದೃಷ್ಟಿಕೋನದಿಂದ ಸಿಎಂ ಬಸವರಾಜ ಬೊಮ್ಮಾಯಿ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಿದರೆ ಬೇಜವಾಬ್ದಾರಿ ಸಚಿವರು ವಿಜಯೋಯತ್ಸವ ಆಚರಿಸಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಎಚ್ ಕುಮಾರಸ್ವಾಮಿ ಅವರು, 'ಸಿಎಂ ಬೊಮ್ಮಾಯಿ ತಮ್ಮ ಸಂಪುಟದ ಸಚಿವರಿಗೆ ತಾತ್ಕಾಲಿಕವಾಗಿ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಿ, ಅಲ್ಲಿನ ಪ್ರವಾಹ ಪರಿಸ್ಥಿತಿ, ಕೋವಿಡ್‌ ಸ್ಥಿತಿಗಳ ನಿರ್ವಹಣೆ ಮಾಡುವಂತೆ ಸೂಚಿಸಿದ್ದರು. ಸಿಎಂ ಬೊಮ್ಮಾಯಿ ಅವರು ಸದಾಶಯದಿಂದ ಜವಾಬ್ದಾರಿ ನೀಡಿದರೆ, ಜವಾಬ್ದಾರಿ ಮರೆತ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ'.

ಹೊಸ ಸಚಿವರು ತಮಗೆ ನಿಗದಿ ಪಡಿಸಿದ ಜಿಲ್ಲೆಗಳಿಗೆ ಹೋದಾಗ ಮಾಡಿಸಿಕೊಂಡ ಸನ್ಮಾನಗಳು, ವಿಜಯೋತ್ಸವ, ಅದ್ದೂರಿ ಸ್ವಾಗತ ಕಂಡು ಜನ ನಾಚಿಕೆಪಟ್ಟಿದ್ದಾರೆ, ಮರುಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾದರೂ, ಸರ್ಕಾರ ಮತ್ತು ಅದರ ವರ್ತನೆ ಬದಲಾದ ಭಾವನೆ ಯಾರಲ್ಲಿಯೂ ಕಾಣುತ್ತಿಲ್ಲ. ಸಿಎಂ ಬದಲಾದರೆ ಸಾಲದು ಸಿಎಂ ರೀತಿಯೇ ಸಚಿವರೂ ನಡೆದುಕೊಳ್ಳಬೇಕು. 

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ, ನೆರೆ ಆತಂಕಗಳು ದೂರವಾಗಿಲ್ಲ. 3ನೇ ಅಲೆಯೊಂದು ಬಾಗಿಲ ಬಳಿಯಲ್ಲೇ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋವಿಡ್‌ ಪ್ರಕರಣಗಳೂ ಏರುತ್ತಿವೆ. ನೆರೆ ಆತಂಕವೂ ದೂರವಾಗಿಲ್ಲ. ಸಚಿವ ಸ್ಥಾನ ಸಿಕ್ಕಿರಿವುದು ಸನ್ಮಾನ ಸ್ವೀಕರಿಸಲಲ್ಲ. ಸೇವೆ ನೀಡಲು ಎಂಬುದು ಈ ಮಂತ್ರಿ ಕೂಟಕ್ಕೆ ಅರಿವಾಗಲಿ ಎಂದು ಕಿಡಿಕಾರಿದ್ದಾರೆ.

SCROLL FOR NEXT