ರಾಜಕೀಯ

ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ; ಪಕ್ಷ ಸಂಘಟನೆ ಮಾಡುತ್ತೇನೆ: ಸಿ.ಪಿ. ಯೋಗೇಶ್ವರ್

Sumana Upadhyaya

ಬೆಂಗಳೂರು: ನೂತನ ಮುಖ್ಯಮಂತ್ರಿಗಳು ಸಚಿವ ಸಂಪುಟ ರಚನೆ ಮಾಡಿದ ನಂತರ ಎರಡು ಮೂರು ಸಾರಿ ಭೇಟಿ ಮಾಡಿದ್ದೇನೆ, ಮಾಧ್ಯಮಗಳ ಮುಂದೆ ಬಹಿರಂಗವಾಗಿರಲಿಲ್ಲ, ಇವತ್ತು ಕೂಡ ಭೇಟಿಯಾಗಿದ್ದೇನೆ. ಈ ಭೇಟಿಯಲ್ಲೇನು ವಿಶೇಷವಿಲ್ಲ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

ನನಗೆ ಮುಖ್ಯಮಂತ್ರಿಗಳ ವಿರುದ್ಧವಾಗಲಿ,  ರಾಜ್ಯ ಬಿಜೆಪಿ ನಾಯಕರ ವಿರುದ್ಧವಾಗಲಿ, ಹೈಕಮಾಂಡ್ ವಿರುದ್ಧ ಯಾವುದೇ ಅಸಮಾಧಾನವಿಲ್ಲ. ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಪಕ್ಷ ಸಂಘಟನೆ ಮಾಡಿಕೊಂಡು ಹೋಗುತ್ತೇನೆ, ಮುಖ್ಯಮಂತ್ರಿಗಳ ಮುಂದೆ ಯಾವುದೇ ಬೇಡಿಕೆಯನ್ನಿಟ್ಟಿಲ್ಲ,  ಮಂತ್ರಿ ಪದವಿಗೆ ಲಾಬಿ ನಡೆಸುವುದಿಲ್ಲ, ಇದಕ್ಕಿಂತ ಹೆಚ್ಚಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಇಂದು ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಸಿ ಪಿ ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ಬಿ ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಬಂಡಾಯವೆದ್ದು ಹೈಕಮಾಂಡ್ ಗೆ ದೂರು ನೀಡಿ ಸಿ ಪಿ ಯೋಗೇಶ್ವರ್ ಸುದ್ದಿಯಾಗಿದ್ದರು. ಅದರಿಂದಾಗಿಯೇ ಬೊಮ್ಮಾಯಿ ಸಂಪುಟದಲ್ಲಿ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿ ಹೋಯಿತು, ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ನೀಡದಂತೆ ಮಾಜಿ ಸಿಎಂ ಯಡಿಯೂರಪ್ಪನವರೇ ಪಟ್ಟು ಹಿಡಿದರು ಎಂಬ ಸುದ್ದಿಯಿದೆ.

ಸದ್ಯ ವಿವಾದಾತ್ಮಕ ಹೇಳಿಕೆಗಳಿಂದ ದೂರ ಇರುವ ಸಿ ಪಿ ಯೋಗೇಶ್ವರ್ ಮುಂದಿನ ದಿನಗಳಲ್ಲಿ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲವಾಗಿದೆ.

SCROLL FOR NEXT