ರಾಜಕೀಯ

ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವಿಲ್ಲ; ಕೇಂದ್ರ ಕೃಷಿ ಸಚಿವೆ ಕರಂದ್ಲಾಜೆ

Srinivasamurthy VN

ಮೈಸೂರು: ರೈತರ ಮನವೊಲಿಸಬಹುದು... ಆದರೆ, ರೈತರಂತೆ ನಟಿಸುವವರ ಮನವೊಲಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಈಗ ಕೇವಲ ದಲ್ಲಾಳಿಗಳ ಹೋರಾಟವಾಗಿ ಉಳಿದಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ನೂತನ ಕೃಷಿ ಕಾಯ್ದೆಗಳಿಂದ ರೈತರು ಎಪಿಎಂಸಿ ಹೊರತಾಗಿ ಹೊರಗೆ ವ್ಯಾಪಾರ ಮಾಡಬಹುದು. ಇದರಿಂದ ಮಂಡ್ಯದ ರೈತನ ಹೊಲಕ್ಕೆ ಮುಂಬೈನಿಂದ ಟ್ರಕ್ ಬಂದು ನಿಲ್ಲುವಂತೆ ಆಗುತ್ತದೆ. ರೈತ ಹೆಚ್ಚಿನ ಬೆಲೆಗೆ ತನ್ನ ಬೆಳೆ ಮಾರಾಟ ಮಾಡಲು ಅನುಕೂಲ  ಆಗಿದೆ ಎಂದು ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು.

ಪ್ರಧಾನಿ ಮೋದಿ ಅವರು ದೇಶದ ರೈತನ ಮಗಳೊಬ್ಬಳನ್ನು ಗುರುತಿಸಿ ಕೃಷಿ ಖಾತೆ ನೀಡಿದ್ದಾರೆ. ಹಳ್ಳಿಯಲ್ಲಿ ನಾನು ಓದುವಾಗ ಕರೆಂಟ್, ರಸ್ತೆ ಕೂಡ ಇರಲಿಲ್ಲ. ಅಂತಹ ಹಳ್ಳಿಯಿಂದ ಬಂದವಳಿಗೆ ಇಂತಹ ಮಹತ್ವದ ಖಾತೆ ಕೊಟ್ಟು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ದೇಶದ ಶೇಕಡ ೮೦ ರಷ್ಟು  ರೈತರ ಹಿತ ಕಾಯಬೇಕಿದೆ. ಅವರು ಬೇರೆ ಬೇರೆ ಕೆಲಸಗಳಿಗೆ ಹೋಗದೆ ಕೃಷಿಯಲ್ಲೇ ಉಳಿಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಯಿಂದ ಕಾರ್ಯಯೋಜನೆ ರೂಪಿಸುತ್ತೇನೆ ಎಂದು ತಿಳಿಸಿದ್ದಾರೆ.

SCROLL FOR NEXT