ರಾಜಕೀಯ

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಚ್ಚರಿ ಗೆಲುವು: ರಾಜಕೀಯ ಸಮೀಕರಣದ ಬದಲಾವಣೆಗೆ ಮುನ್ನುಡಿ!

Shilpa D

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರತಿಷ್ಠಿತ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ರಾಜಕೀಯ ಚಿತ್ರಣವನ್ನು ಬದಲಿಸಬಹುದು.

ಮೊದಲ ಬಾರಿಗೆ ಅಧಿಕಾರ ಹಿಡಿಯುವ ಮೂಲಕ, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹಳೆಯ ಮೈಸೂರು ಪ್ರದೇಶದಲ್ಲಿ ತನ್ನ ನೆಲೆಯನ್ನು ಬಲಪಡಿಸಿಕೊಳ್ಳಲು ಹವಣಿಸುತ್ತಿದೆ.

1983ರಲ್ಲಿ ಮೈಸೂರು ನಗರ ಪಾಲಿಕೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿದ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು. ಬಿಜೆಪಿ ಮೇಯರ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ.

ಮೇಯರ್ ಹುದ್ದೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಗುದ್ದಾಡುತ್ತಿರುವಾಗ ಬಿಜೆಪಿ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೇಯರ್ ಸ್ಥಾನಗಳನ್ನು ಕ್ರಮವಾಗಿ ಎರಡು ಮತ್ತು ಮೂರು ವರ್ಷಗಳ ಕಾಲ ಹಂಚಿಕೊಳ್ಳುವ ಒಪ್ಪಂದದೊಂದಿಗೆ ಮೈತ್ರಿ ಮಾಡಿಕೊಂಡಿವೆ. ಆದರೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಹಸ್ತಾಂತರಿಸಬೇಕಿದ್ದ ಜೆಡಿಎಸ್ ತನ್ನ ಹಠ ಮುಂದುವರಿಸಿತ್ತು.

ಕಾಂಗ್ರೆಸ್-ಜೆಡಿಎಸ್ ಮೇಯರ್ ಉಪಮೇಯರ್ ಸಂಬಂಧ ಮಾಡಿಕೊಂಡಿದ್ದ ಒಪ್ಪಂದವನ್ನು ಜೆಡಿಎಸ್ ಎಂಎಲ್‌ಸಿಗಳಾದ ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಮತ್ತಿತರ ನಾಯಕರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದು ಕಾಂಗ್ರೆಸ್ ಗೆ ಹೊಸ ಸವಾಲಾಗಿದೆ, ಮುಂದಿನ ಚುನಾವಣೆಗಳಲ್ಲಿ ಮೈಸೂರು ಗ್ರಾಮೀಣ ಪ್ರದೇಶಗಳಲ್ಲಿ ಅಸ್ಥಿತ್ವ ಹೊಂದಿರದ ಬಿಜೆಪಿಗೆ ಜೆಡಿಎಸ್ ಜೊತೆಗಿನ ಒಪ್ಪಂದ ಲಾಭದಾಯಕವಾಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಎರಡು ಬಾರಿ ಜೆಡಿಎಸ್ ನಾಯಕರನ್ನು ಭೇಟಿ ಮಾಡಿ ಅವರ ಬೆಂಬಲ ಕೋರಿದ್ದರು. ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಷದ ಎಲ್ಲ ಕಾರ್ಯಕರ್ತರ ಗೆಲುವು ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿದ ಜೆಡಿಎಸ್ ಶಾಸಕ ಸಾ ರಾ ಮಹೇಶ್
ಸೇರಿದಂತೆ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದರು. ಆದಾಗ್ಯೂ, ಪಂಚಾಯತ್ ಚುನಾವಣೆಗೆ ಬಿಜೆಪಿಯು ಬೇರೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ.

ಚುನಾವಣೆಯಲ್ಲಿ ನಾವು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಅವರು ಅವರ ಪಕ್ಷದ ಅಭ್ಯರ್ಥಿಯನ್ನು ಅವರು ಕಣಕ್ಕೆ ಇಳಿಸಿದ್ದಾರೆ. ಇದರ ಹೊರತಾಗಿ ಯಾವುದೇ ರೀತಿಯ ಒಪ್ಪಂದ ಆಗಿಲ್ಲ ಎಂದರು.

ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದ್ದು, ನೂತನ ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆಗೊಂಡಿದ್ದಾರೆ. ಭಾರೀ ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದ ಈ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಒಳಒಪ್ಪಂದ ನಡೆದಿದೆ ಎನ್ನಲಾಗುತ್ತಿದೆ. ಮೂರು ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೂ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ವಾಕ್‌ಔಟ್‌ ಮಾಡಿದೆ.

ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಆರ್ ಧ್ರುವನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT