ರಾಜಕೀಯ

ದಾವಣಗೆರೆ: ಸೆಪ್ಟೆಂಬರ್ ತಿಂಗಳಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

Manjula VN

ದಾವಣಗೆರೆ: ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸೇರಿದಂತೆ ಸರಣಿ ಚುನಾವಣೆಗಳು ಎದುರಾಗುವ ಹಿನ್ನೆಲೆಯಲ್ಲಿ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ಬಸವರಾಜ ಬೊಮ್ಮಾಯಿಯವರು ರಾಜ್ಯ ಮುಖ್ಯಮಂತ್ರಿಗಳಾದ ಬಳಿಕ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ ಸಭೆ ಇದಾಗಿದ್ದು, ಸಭೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಬಿ.ಎಲ್.ಸಂತೋಷ್ ಅವರು ಪಾಲ್ಗೊಳ್ಳಲಿದ್ದಾರೆನ್ನಲಾಗುತ್ತಿದೆ. 

ನಿನ್ನೆಯಷ್ಟೇ ಅಪೂರ್ವ ರೆಸಾರ್ಟ್‌ಗೆ ಭೇಟಿ ನೀಡಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಪರಿಶೀಲನೆ ನಡೆಸಿದರು. 

ಗಣೇಶ ಚತುರ್ಥಿ ಹಬ್ಬದ ಬಳಿಕ ಸಭೆಯನ್ನು ನಡೆಸಲಾಗುತ್ತದೆ. ನಾವು ಜಿಲ್ಲಾ ಮಟ್ಟದ ಗ್ರಾಮ ಪಂಚಾಯಿತಿ ಸಮಾವೇಶಗಳನ್ನು ಅಕ್ಟೋಬರ್‌ನಲ್ಲಿ ನಡೆಸುತ್ತೇವೆ. ಪಂಚಾಯತ್ ಸದಸ್ಯರೊಂದಿಗೆ ನಮ್ಮ ನಾಯಕರು ಮಾತುಕತೆ ನಡೆಸಲಿದ್ದಾರೆಂದು ತಿಳಿಸಿದ್ದಾರೆ. 

2022ರ ಜನವರಿ ತಿಂಗಳಿನಲ್ಲಿ 25 ಎಂಎಲ್'ಸಿ ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಸಭೆಯಲ್ಲಿ ಸೆ.3ರಂದು ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ಬೆಳಗಾವಿಯ ಮೂರು ನಗರಗಳಲ್ಲಿ ನಡೆಯುವ ಚುನಾವಣೆ ಕುರಿತು ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ. 

ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಹಿರಿಯ ಎಂಎಲ್‌ಸಿ ಎನ್ ರವಿಕುಮಾರ್ ಅವರು ಮಾತನಾಡಿ, ಪಕ್ಷವನ್ನು ಬುಡಮಟ್ಟದಿಂದ ಬಲಪಡಿಸಲು ಬಿಜೆಪಿ ನಾಯಕತ್ವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT