ರಾಜಕೀಯ

ಬಿಜೆಪಿ ಅತಿದೊಡ್ಡ ಪಕ್ಷ, ಜೆಡಿಎಸ್ ಜೊತೆ ಮೈತ್ರಿ ಇಲ್ಲ; ಯಡಿಯೂರಪ್ಪನವರ ಅನುಭವಗಳನ್ನು ಪಕ್ಷ ಬಳಸಿಕೊಳ್ಳುತ್ತದೆ: ಅರುಣ್ ಸಿಂಗ್

Sumana Upadhyaya

ಮೈಸೂರು: ಬಿಜೆಪಿ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು ಜೆಡಿಎಸ್ ಹಾಗೂ ಬೇರಾವ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಮುಂದಿನ ಪಂಚಾಯತ್, ಪಾಲಿಕೆ ಚುನಾವಣೆಗಳು ಸೇರಿದಂತೆ 2023ರ ವಿಧಾನಸಭೆ ಚುನಾವಣೆಯು ನಮಗೆ ಮುಖ್ಯವಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತದಿಂದ ಸರ್ಕಾರ ರಚಿಸುವುದು ನಮ್ಮ ಗುರಿಯಾಗಿದೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ರಾಜ್ಯದ ಜನತೆ ನೋಡಿದ್ದಾರೆ ಎಂದರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಂದು ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆ ಮೈಸೂರು ಭಾಗ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷ ಸಂಘಟನೆ ಮಾಡಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಸರ್ಕಾರ ಉತ್ತಮವಾದ ಆಡಳಿತ ನಡೆಸುತ್ತಿದೆ.ಸಚಿವರಿಗೆ ಖಾತೆ ಹಂಚಿಕೆ ಸಿಎಂ ಅವರ ಪರಮಾಧಿಕಾರ, ಇದರಲ್ಲಿ ನಮ್ಮ ಹಸ್ತಕ್ಷೇಪ, ಕೆಲಸವೇನು ಇಲ್ಲ, ಸಚಿವರಿಗೆ ಖಾತೆ ಹಂಚಿಕೆಯಾಗಿ ಎಲ್ಲರೂ ತಮ್ಮ ತಮ್ಮ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದರು.

ಯಡಿಯೂರಪ್ಪನವರು ಪ್ರಭಾವಿ, ಅತಿದೊಡ್ಡ ನಾಯಕ: ಬಿ ಎಸ್ ಯಡಿಯೂರಪ್ಪನವರು ಬಿಜೆಪಿಯ ಅತಿದೊಡ್ಡ ಪ್ರಭಾವಿ ನಾಯಕ, ಸಂಘಟನೆ ಅನುಭವ ಅವರಿಗಿದೆ. ಅವರ ಅನುಭವಗಳನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುವುದು ಎಂದು ಕೂಡ ಅರುಣ್ ಸಿಂಗ್ ಹೇಳಿದ್ದಾರೆ.

SCROLL FOR NEXT