ಮಂಗಳವಾರ ಬೀದರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. 
ರಾಜಕೀಯ

ವಿಧಾನ ಪರಿಷತ್ ಚುನಾವಣೆ: 2023 ವಿಧಾನಸಭೆ ಹೋರಾಟಕ್ಕೆ ಕಾಂಗ್ರೆಸ್ ನಾಯಕರಿಗೆ ಹೊಸ ಚೈತನ್ಯ ನೀಡಿದ ಫಲಿತಾಂಶ

ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಹೊಸ ಚೈತನ್ಯ ನೀಡಿದಂತಾಗಿದೆ.

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಹೊಸ ಚೈತನ್ಯ ನೀಡಿದಂತಾಗಿದೆ.

25 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಳೆದ ಬಾರಿ ಕಾಂಗ್ರೆಸ್ 14 ಸ್ಥಾನ ಗಳಿಸಿತ್ತು. ಈ ಬಾರಿ ಮೂರು ಸ್ಥಾನ ಕಡಿಮೆಯಾಗಿ ಪಕ್ಷದ ಒಟ್ಟಾರೆ ಗಳಿಕೆ 11 ಆಗಿದೆ. ಆದಾಗ್ಯೂ ಈ ಫಲಿತಾಂಶ ಕಾಂಗ್ರೆಸ್ ವಲಯದಲ್ಲಿ ಹೊಸ ಚೈತನ್ಯ ನೀಡಿದಂತಾಗಿದೆ. ಏಕೆಂದರೆ 14 ಸ್ಥಾನ ಗಳಿಸಿದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈಗ ಪ್ರತಿಪಕ್ಷದಲ್ಲಿದೆ.

15 ಸ್ಥಾನ ಗೆಲ್ಲುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದರೂ 8 ರಿಂದ 10 ಸ್ಥಾನ ಜಯಗಳಿಸುವ ವಿಶ್ವಾಸವಷ್ಟೇ ಕಾಂಗ್ರೆಸ್ ನಾಯಕರಿಗೆ ಇತ್ತು. ಆದರೆ, 11 ಸ್ಥಾನಗಳಲ್ಲಿ ಭರ್ಜರಿ ಜಯಗಳಿಸಿದೆ. ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ದೊಡ್ಡ ಮಟ್ಟದಲ್ಲಿ ಸೋಲು ಕಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಚುನಾವಣೆಗೆ ಪಕ್ಷದ ನಾಯಕರು ರೂಪಿಸಿದ್ದ ಕಾರ್ಯತಂತ್ರ ತಕ್ಕಮಟ್ಟಿಗೆ ಯಶಸ್ಸು ನೀಡಿದೆ. ಇದು ಕಾಂಗ್ರೆಸ್ ನಾಯಕರಿಗೆ ಹೊಸ ಚೈತನ್ಯ ನೀಡಿದೆ.

ಇದರೊಂದಿಗೆ ಮತಾಂತರ ವಿರೋಧಿ ಮಸೂದೆ ಮತ್ತು ಲವ್ ಜಿಹಾದ್ ಮಸೂದೆ ಸೇರಿದಂತೆ ಕೆಲವು ವಿವಾದಾತ್ಮಕ ಮಸೂದೆಗಳನ್ನು ಮಂಡಿಸಲಿರುವ ಮೇಲ್ಮನೆಯಲ್ಲಿ ಆಡಳಿತಾರೂಢ ಬಿಜೆಪಿ ಪೂರ್ಣ ಬಹುಮತ ಪಡೆಯುವುದನ್ನು ತಡೆಯುವಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್ ನಾಯಕರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಚುನಾವಣೆಗೆ ಒಗ್ಗಟ್ಟನ್ನು ಪ್ರದರ್ಶಿಸಿದ್ದು, ಇದು ತುಮಕೂರು ಮತ್ತು ಬೆಳಗಾವಿ ಸೇರಿದಂತೆ ಹಲವಾರು ಸ್ಥಾನಗಳ ಗೆಲುವಿನಲ್ಲಿ ಪ್ರತಿಬಿಂಬಿತವಾಗಿದೆ.

ಈ ನಡುವೆ ಧಾರವಾಡದ ಉಭಯ ಸದಸ್ಯ ಸ್ಥಾನದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ಉತ್ತಮ ಅಂತರದಿಂದ ಗೆಲುವು ಸಾಧಿಸಿದ್ದು ಪಕ್ಷಕ್ಕೆ ದೊಡ್ಡ ಬಲ ಬಂದಂತಾಗಿದೆ.

ಮೊದಲು ಮುಖ್ಯಮಂತ್ರಿಗಳ ತವರು ಕ್ಷೇತ್ರ ಹಾನಗಲ್ ನಲ್ಲಿ ಜನರು ಬೆಂಬಲ ನೀಡಿದ್ದರು. ಇದೀಗ ಪ್ರಬುದ್ಧರು, ಚುನಾವಣಾ ಪ್ರತಿನಿಧಿಗಳು ರಾಜ್ಯದಲ್ಲಿ ಬದಲಾವಣೆ ತರಲು ಬಯಸಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಕೆಲವೇ ಅಂತರಗಳಿಂದ ಸೋಲು ಕಂಡಿದ್ದೇವೆ. ಉಭಯ ಸದಸ್ಯ ಸ್ಥಾನಗಳಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದೇವೆ. ಇದೀಗ ಮತದಾನದ ಮಾದರಿ ಕಾಂಗ್ರೆಸ್ ಪರವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ.

“ನಾವು ಮೂರು ಸ್ಥಾನಗಳನ್ನು ಕಡಿಮೆ ಗೆದ್ದಿದ್ದೇವೆ. ದ್ವೇಷದ ಪ್ರಚಾರ, ಮತದಾನ ಯಂತ್ರಗಳ ದುರ್ಬಳಕೆ ಸೇರಿದಂತೆ ಹಲವು ತಂತ್ರಗಳನ್ನೇ ತನ್ನ ಸಂಸ್ಕೃತಿಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯ ಕೆಲವು ಲೆಕ್ಕಾಚಾರ ಈ ಬಾರಿ ಕೆಲಸ ಮಾಡಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT