ರಾಜಕೀಯ

ಮಾತನಾಡಲು ಅವಕಾಶ ಕೊಡಿ: ಕಲಾಪ ಸರಿದಾರಿಗೆ ತರಲು ಸಭಾಧ್ಯಕ್ಷರು ಸುಸ್ತೋ ಸುಸ್ತು; ವಿಧಾನಸಭೆ ಕೊನೆ ದಿನದ ಕಥೆ ವ್ಯಥೆ!

Shilpa D

ಬೆಳಗಾವಿ: ವಿಧಾನಸಭೆಯಲ್ಲಿ ಬೆರಳೆಣಿಕೆ ಸದಸ್ಯರು.  ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಬೇಕೆಂದು ಅವಕಾಶ ಸಿಗದ ಸದಸ್ಯರ ಕೂಗಾಟ.  ನಂಗೆ ಮೊದಲ ಅವಕಾಶ ಕೊಡಬೇಕೆಂದು ಸದಸ್ಯರ ಹಠ.. ಕಲಾಪ ಸರಿದಾರಿಗೆ ತರಲು ಸಭಾಧ್ಯಕ್ಷರು ಸುಸ್ತೋ ಸುಸ್ತು..

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಕೊನೆಯ ದಿನ ಬೆರಳೆಣಿಕೆಯ ಸದಸ್ಯರು ಕಾಣಿಸಿಕೊಂಡರು. ಕೆಲವೊಂದಿಷ್ಟು ಸದಸ್ಯರು ರಜೆ ಪಡೆದುಕೊಂಡಿದ್ದರೆ, ಇನ್ನೊಂದಿಷ್ಟು ಶಾಸಕರು ಕಲಾಪದಿಂದ ದೂರ ಉಳಿದಿದ್ದರು.

ಶುಕ್ರವಾರದ 10ನೇ ದಿನದ ಕಲಾಪದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲು ಅವಕಾಶ ಕೋರುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಹಾಗೂ ಎ.ಎಸ್.ಪಾಟೀಲ್ ನಡಹಳ್ಳಿ ಪಟ್ಟುಹಿಡಿದರು.

ಈ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಎಲ್ಲರಿಗೂ ಮಾತನಾಡಲು ಅವಕಾಶ ಮಾಡಿ ಕೊಡುತ್ತೇನೆ, ಸಮಯದ ಅಭಾವ ಇದೆ ವೀರಣ್ಣ ಚರಂತಿಮಠ ಮಾತನಾಡಲಿದ್ದಾರೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಷ್ಟೊತ್ತಿಗೆ ಸಭೆ ಮುಕ್ತಾಯ ಆಗುತ್ತದೆ ಎಂದು ಕೇಳಿದರು. ಮಧ್ಯಾಹ್ನ 1:30ಕ್ಕೆ ಮುಕ್ತಾಯವಾಗುತ್ತದೆ ಎಂಬುದು ಸಭಾಧ್ಯಕ್ಷರ ಪ್ರತ್ಯುತ್ತರವಾಗಿತ್ತು.

ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡದೆ ಹೋದ್ರೆ ಹೇಗೆ, ಜನ ಏನು ಅನ್ನುತ್ತಾರೆ? ಸಭೆ ಇವತ್ತೇ ಮುಗಿಸೋದು ಮುಖ್ಯ ಅಲ್ಲ. ಚರ್ಚೆ ಮಾಡೋದು ಮುಖ್ಯ. ಸಾಯಂಕಾಲದವರೆಗೆ ಕಲಾಪ ನಡೆಯಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ.  ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಬೇಕಿದೆ ಎಂದು ಸಭಾಧ್ಯಕ್ಷರು ಸಿದ್ದರಾಮಯ್ಯವರಿಗೆ ಮನವರಿಕೆ ಮಾಡಿದ್ರು. ಎರಡು ಮೂರು ಜನ ಮಾತನಾಡಿದ ಮೇಲೆ ನಂಗೆ ಹೆಚ್ಚಿನ ಸಮಯ ಸಿಗಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈ ಮಧ್ಯೆ ಸಚಿವ ಕಾರಜೋಳ, ನಾವು ಕೂಡ ಹೋಗಬೇಕು ಎಂದರು. ಈ ಮಾತಿಗೆ ಸಿದ್ದರಾಮಯ್ಯ, ನೀವು ಸರ್ಕಾರದಲ್ಲಿರುವವರು, ಹೋಗೋದು ಮುಖ್ಯ ಅಲ್ಲ ಎಂದು ತಿರುಗೇಟು ನೀಡಿದರು. ಈ ವಿಚಾರಕ್ಕೆ ಕಾರಜೋಳ, ಬಾಗಲಕೋಟೆಯ ಇಬ್ಬರು ಸದಸ್ಯರು ಹತ್ತತ್ತು ನಿಮಿಷ ಮಾತನಾಡುತ್ತಾರೆ.  ಈಗಾಗಲೇ ಎಲ್ಲರೂ ಹೋಗಿದ್ದಾರೆ. ನಿಮ್ಮ ಹಿಂದೆ ಯಾರಿದ್ದಾರೆ ನೋಡಿಕೊಳ್ಳಿ, ಯಾರು ಇಲ್ಲ ಎಂದರು. ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, ನೀವು ಬೇಕಾದರೇ ಮನೆಗೆ ಹೋಗಿ ಎಂದು ಸಚಿವ ಕಾರಜೋಳರಿಗೆ ತಿವಿದರು.

ಮೊದಲು ಒಬ್ಬರು ಮಾತನಾಡಲಿ, ಆಮೇಲೆ ತಾನು ಉತ್ತರ ಕರ್ನಾಟಕದ ಬಗ್ಗೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು. ಕಲಾಪ ಇಂದು 1:30ಕ್ಕೆ ಮುಕ್ತಾಯ ಆಗುವುದರಿಂದ ನೀವು ಹೆಚ್ಚು ಹೊತ್ತು ಮಾತಾಡಲು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಸಭಾಧ್ಯಕ್ಷರು ಹೇಳಿದರು. ಉತ್ತರ ಕರ್ನಾಟಕದ ಬಗ್ಗೆ 10 ನಿಮಿಷದಲ್ಲಿ ಮಾತನಾಡಕ್ಕಾಗುತ್ತಾ? ತಾನು ಮಾತನಾಡಬಾರದು ಅನ್ನೋದು ಸರ್ಕಾರದ ಉದ್ದೇಶ ಎಂದು  ಸಿದ್ದರಾಮಯ್ಯ ಆರೋಪಿಸಿದರು.

ಶಾಸಕ ವೀರಣ್ಣ ಚರಂತಿಮಠ ಈಗ ಮಾತಾಡಲಿ, ಮೊನ್ನೆ ನಿಮ್ಮ ಪರವಾಗಿ ಎಂ.ಬಿ.ಪಾಟೀಲ್ ಮಾತನಾಡಿದ್ದಾರೆ ಎಂದು ಸಭಾಧ್ಯಕ್ಷರು ಹೇಳಿದರು. ಎಂ.ಬಿ.ಪಾಟೀಲ್ ಮಾತನಾಡಿದ್ದರೆ ಅದು ಹೇಗೆ ನನ್ನ ಅನಿಸಿಕೆ ಆಗುತ್ತೆ ಎಂದು ಪ್ರಶ್ನೆ ಮಾಡಿದರು. ಬಳಿಕ ಸಭಾಧ್ಯಕ್ಷರು, ಎಂ.ಬಿ.ಪಾಟೀಲ್ ಮಾತಾಡಿದ್ರೆ ನಿಮ್ಮ ಇನ್ಷಿಯೇಟ್ ಎಂದಿದ್ರಿ ಎಂದು ಮರಳಿ ಉತ್ತರ ಕೊಟ್ಟರು.

ಕೊನೆಗೆ ಎರಡು ಮೂರು ಸದಸ್ಯರು ಮಾತನಾಡಿದ ಮೇಲೆ ನಿಮಗೆ ಅವಕಾಶ ಕೊಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಸಭಾಧ್ಯಕ್ಷರು ಸಮಾಧಾನ ಮಾಡಿದರು. ಬಳಿಕ ವೀರಣ್ಣ ಚರಂತಿಮಠ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲು ಅವಕಾಶ ಪಡೆದರು.

SCROLL FOR NEXT