ರಾಜಕೀಯ

ಬೆಳಗಾವಿ ಅಧಿವೇಶನದ ಕೊನೆಯ ದಿನದ ಕಲಾಪ, ಹಲವು ಸದಸ್ಯರು ಗೈರು; ವಿಧಾನಸಭಾಧ್ಯಕ್ಷ ಕಾಗೇರಿ ಅಸಮಾಧಾನ

Sumana Upadhyaya

ಬೆಳಗಾವಿ: ಇಂದು ಡಿಸೆಂಬರ್ 24ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಕೊನೆಯ ದಿನ. ಕೊನೆಯ ದಿನದ ಅಧಿವೇಶನದ ಕಲಾಪ ಮಹತ್ವದ್ದಾಗಿರುತ್ತದೆ. ಹಲವು ಪ್ರಮುಖ ವಿಚಾರಗಳು ಚರ್ಚೆಗೆ ಬರುತ್ತವೆ.

ಆದರೆ ಇಂದು ಸದನಕ್ಕೆ ಹಲವು ಸದಸ್ಯರು ಗೈರಾಗಿದ್ದಾರೆ. ಇಂದು ಬೆಳಗ್ಗೆ ಕಲಾಪ ಆರಂಭವಾದಾಗ ವಿಧಾನಸಭೆಯಲ್ಲಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದಸ್ಯರ ಹಾಜರಾತಿ ಖಚಿತಪಡಿಸಿಕೊಳ್ಳಲು ಹೆಸರು ಕರೆಯುತ್ತಾ ಹೋದರು. ಆದರೆ ಬಹುತೇಕ ಸದಸ್ಯರ ಅನುಪಸ್ಥಿತಿಯೇ ಎದ್ದುಕಂಡಿತು.

''ಶುಕ್ರವಾರ ಬಂದರೆ ಇದೇ ಕಥೆ'' ಎಂದು ವಿಧಾನಸಭಾಧ್ಯಕ್ಷರು ತಮ್ಮ ಅಸಹನೆ, ಅಸಮಾಧಾನವನ್ನು ವ್ಯಕ್ತಪಡಿಸಿದರು. ನಿನ್ನೆ ಮತಾಂತರ ನಿಷೇಧ ಕಾಯ್ದೆ ಎರಡೂ ಸದನಗಳಲ್ಲಿ ಮಂಡನೆಯಾಗಿ ಅನುಮೋದನೆಗೊಂಡಿದೆ. ಇಂದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದೆ. ಅದರ ಜೊತೆಗೆ ಬಿಟ್ ಕಾಯಿನ್ ದಂಧೆಯ ವಿಚಾರವನ್ನು ಕೂಡ ಇಂದಿನ ಕಲಾಪದಲ್ಲಿ ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆಯಿದೆ.

ತಮ್ಮ ಕ್ಷೇತ್ರಗಳ ಜನರ ಸಮಸ್ಯೆಗಳು, ಆಗಬೇಕಾದ ಕೆಲಸಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸದನದಲ್ಲಿ ಹಾಜರಿರಬೇಕಾದ ಸದಸ್ಯರು ಈ ರೀತಿ ಅಸಡ್ಡೆ ತೋರಿಸಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ.

ಇಂದಿನ ಸಭೆಯಲ್ಲಿ ವಿಧಾನಸಭಾಧ್ಯಕ್ಷರು ಬಹಳ ಅಸಮಾಧಾನಗೊಂಡಿದ್ದಾರೆ. ಶಾಸಕರು ನಡೆದುಕೊಳ್ಳುವ ರೀತಿಯಿಂದ ಅಸಂತೋಷಗೊಂಡಿದ್ದು ಇದೇನು ನೀವು ಸದನದಲ್ಲಿ ನಡೆದುಕೊಳ್ಳುವ ರೀತಿಯಾ ಎಂದು ಕೇಳಿದ್ದಾರೆ. 

SCROLL FOR NEXT