ರಾಜಕೀಯ

ಎಲ್ಲಕ್ಕಿಂತ ಪಕ್ಷ ದೊಡ್ಡದು; ಅಪನಂಬಿಕೆಯ ಪರಿಣಾಮವಾಗಿ ನಮ್ಮ ಗುರಿ ಹಿಂದೆ ಬೀಳಬಾರದು: ಸಿಟಿ ರವಿ

Vishwanath S

ಹುಬ್ಬಳ್ಳಿ: ಪಕ್ಷ ಎಲ್ಲಕ್ಕಿಂತ ದೊಡ್ಡದು. ಪಕ್ಷದ ಸೂಚನೆಯನ್ನು ಯಾರೂ ಮೀರಬಾದರು. ಪರಸ್ಪರ ಅಪನಂಬಿಕೆಯ ಪರಿಣಾಮವಾಗಿ ನಮ್ಮ ಗುರಿ ಹಿಂದೆ ಬೀಳಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕರೆ ನೀಡಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸಿ.ಟಿ.ರವಿ, ‘ಪ್ರಚಲಿತ ಭಾರತದಲ್ಲಿ ನಮಗಿರುವ ರಾಜಕೀಯ ಸವಾಲುಗಳು ಮತ್ತು ಅದಕ್ಕೆ ಪರಿಹಾರ’ ಕುರಿತಂತೆ ಮಾತನಾಡಿ, ಒಂದು ರಾಜಕೀಯ ಪಕ್ಷವು ತನ್ನ ಸೈದ್ಧಾಂತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕು. ಪಕ್ಷಕ್ಕಾಗಿ ಬದ್ಧತೆಯಿಂದ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಅವರ ಬದ್ಧತೆಯ ಮೂಲಕ ಸಮಾಜ ಮತ್ತು ದೇಶ ನಿರ್ಮಾಣಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷ ಅವರಿಗೆ ಅವಕಾಶ ಕೊಡಬೇಕು. ಸಣ್ಣ ಜನಾಂಗಗಳಲ್ಲೂ ರಾಜಕೀಯ ಪ್ರಜ್ಞೆ, ರಾಜಕೀಯ ಜಾಗೃತಿ ಮೂಡಿಸಿ ಅವಕಾಶವನ್ನು ಪಕ್ಷ ಕಲ್ಪಿಸಲು ಅವರು ಸಲಹೆ ನೀಡಿರುವುದಾಗಿ ತಿಳಿಸಿದರು.

ತುರ್ತು ಪರಿಸ್ಥಿತಿ ಬಳಿಕ ಪಿಸುಮಾತಿನ ಆಂದೋಲನದ ಕಾರಣ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೋಲಿನ ಬಗ್ಗೆ ಉಲ್ಲೇಖಿಸಿದ ಅವರು, ಪಕ್ಷದ ಬೆಳವಣಿಗೆಯ ಜೊತೆ ರಾಜಕೀಯ ಪ್ರಜ್ಞೆ ಬೆಳೆಸುವುದು, ಮಾನವನ ದೌರ್ಬಲ್ಯ ಎನಿಸಿದ ಪಿಸುಮಾತಿನ ಆಂದೋಲನದ ವಿರುದ್ಧ ದೇಶಪ್ರೇಮಿ ಮಾಧ್ಯಮದ ಸಹಕಾರವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾಗಿ ವಿವರಿಸಿದರು. ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯತೆ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾಗಿ ತಿಳಿಸಿದರು.

ಇತ್ತ ವಿವಿಧ ಸಾಧನೆಗಳಿಗೆ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸುವ ನಿರ್ಣಯವನ್ನು ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಎರಡನೇ ದಿನದ ರಾಜ್ಯ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಪಕ್ಷದ ರಾಜ್ಯ ಮುಖ್ಯ ವಕ್ತಾರದ ಎಂ.ಜಿ.ಮಹೇಶ್ ತಿಳಿಸಿದರು.

ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರದ ಜೊತೆ ರಾಷ್ಟ್ರ ಮಂದಿರವನ್ನು ಕಟ್ಟುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಅಪರಿಮಿತ ಕಾರ್ಯವನ್ನು ಸಭೆ ಶ್ಲಾಘಿಸಿದೆ. ಬಾಹ್ಯಾಕಾಶದಿಂದ ಆರಂಭಿಸಿ ಕೋವಿಡ್ ಲಸಿಕೆವರೆಗೆ ಸಾಧನೆ, ಎಲ್ಲಾ ರಂಗಗಳಲ್ಲಿ ಆತ್ಮನಿರ್ಭರತೆ ಕಡೆ ದೇಶವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನಕ್ಕಾಗಿ ಕಾರ್ಯಕಾರಿಣಿಯು ಪ್ರಧಾನಿ ಮೋದಿಯನ್ನು ಅಭಿನಂದಿಸಿದೆ ಎಂದರು.

ಸೇನೆ, ಶಸ್ತ್ರಾಸ್ತ್ರ ತಯಾರಿ, ಸೆಮಿ ಕಂಡಕ್ಟರ್‍ಗಳ ಉತ್ಪಾದನೆಗೆ 75 ಸಾವಿರ ಕೋಟಿ ರೂಪಾಯಿ ಹೂಡಿಕೆ, ಇಂಧನ ದರ ಇಳಿಸಲು ಸುಂಕ ಇಳಿಸಿ ಸಾಮಾನ್ಯ ಜನರ ಸಂಕಷ್ಟ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದನ್ನು ಅಭಿನಂದಿಸಿ ಮೆಚ್ಚುಗೆ ಸೂಚಿಸಲಾಗಿದೆ. ಕೇಂದ್ರದಂತೆ ಬಿಜೆಪಿ ರಾಜ್ಯ ಸರಕಾರಗಳು ಸುಂಕ ಇಳಿಸಿ ಇಂಧನ ದರ ಇಳಿಕೆಗೆ ಕಾರಣವಾಗಿವೆ. ಆದರೆ, ಕಾಂಗ್ರೆಸ್ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದ ಮಹೇಶ್,ವಿಶ್ವವಂದ್ಯ ಭಾರತದ ನಿರ್ಮಾಣಕ್ಕಾಗಿ ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿರುವ ಸಮಗ್ರ ಅಭಿವೃದ್ಧಿ ಕಾರ್ಯಕ್ಕಾಗಿ ಮೊದಲ ರಾಜಕೀಯ ನಿರ್ಣಯದಲ್ಲಿ ಅಭಿನಂದನೆ ಸಲ್ಲಿಸಲಾಗಿದೆ ಎಂದರು.

ವಕ್ತಾರರಾದ ಡಾ. ಗಿರಿಧರ್ ಉಪಾಧ್ಯಾಯ, ನಾಗನಗೌಡರ, ಗೋಪಿ ಕಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

SCROLL FOR NEXT