ರಾಜಕೀಯ

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಮತ ಎಣಿಕೆ ಆರಂಭ, ಮಧ್ಯಾಹ್ನ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆ

Sumana Upadhyaya

ಬೆಂಗಳೂರು: ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ.

ರಾಜ್ಯದಲ್ಲಿ ಮೊನ್ನೆ ಡಿಸೆಂಬರ್ 27ರಂದು ನಡೆದಿದ್ದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಕೆಲವು ಕ್ಷೇತ್ರಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. 

ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 

ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ ಹಾಗೂ ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಗಳಿಗೆ ಚುನಾವಣೆ ನಡೆಯುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆ ಸೇರಿ 209 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು.

ವಿವಿಧ ಕಾರಣಗಳಿಂದ ತೆರವಾಗಿರುವ ಚಾಮರಾಜನಗರ ಸಭೆಯ 6, ಹರಿಹರ ನಗರಸಭೆಯ 21, ದಾಂಡೇಲಿ ನಗರಸಭೆಯ 18, ಗೌರಿಬಿದನೂರು ನಗರಸಭೆಯ 10, ಮೂಡಲಗಿ ಪುರಸಭೆಯ 9, ಚಡಚಣ ಪಟ್ಟಣ ಪಂಚಾಯಿತಿಯ 4, ಸೇಡಂ ಪುರಸಭೆಯ 13, ಹಾನಗಲ್ ಪುರಸಭೆಯ 19 ಹಾಗೂ ಜಮಖಂಡಿ ನಗರಸಭೆಯ 9 ಸ್ಥಾನಗಳಿಗೂ ಚುನಾವಣೆ ನಡೆದಿದೆ.

ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಿಪಿಐ (ಎಂ), ಎಸ್‌ಡಿಪಿಐ, ಅಮ್ ಆದ್ಮಿ ಪಕ್ಷ, ಕೆ.ಆರ್.ಎಸ್. ಸಹಿತ ಹಲವು ಪಕ್ಷಗಳು ಹಾಗೂ ಪಕ್ಷೇತರರು ಸೇರಿ 4,961 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗುತ್ತದೆ.

ಹೆಬ್ಬಗೋಡಿ ನಗರಸಭೆಯಲ್ಲಿ ಈಗಾಗಲೇ ಐವರ ಅವಿರೋಧ ಆಯ್ಕೆಯಾಗಿದ್ದು, 26 ಅಭ್ಯರ್ಥಿಗಳ ಫಲಿತಾಂಶ ಬರಬೇಕಿದೆ.

ಮೂರೂ ಪಕ್ಷಗಳಿಗೆ ಚುನಾವಣಾ ದಿಕ್ಸೂಚಿ: 2023ರ ಏಪ್ರಿಲ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸ್ಥಳೀಯ ಮಟ್ಟದಲ್ಲಿ ರಾಜ್ಯದ ಪ್ರಮುಖ ಮೂರು ಪಕ್ಷಗಳಲ್ಲಿ ಯಾವ ಪಕ್ಷಗಳ ಮೇಲೆ ಜನರಿಗೆ ಒಲವಿದೆ ಎಂಬುದು ಸ್ಥಳೀಯ ಮಟ್ಟದ ಚುನಾವಣೆಗಳಿಂದ ನಿರ್ಧಾರವಾಗುತ್ತದೆ.

SCROLL FOR NEXT