ರಾಜಕೀಯ

ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಅಧಿವೇಶನ ನಡೆಸಿ: ಬಸವರಾಜ ಹೊರಟ್ಟಿ ಸೇರಿ ಉತ್ತರ ಕರ್ನಾಟಕ ನಾಯಕರ ಒತ್ತಾಯ

Sumana Upadhyaya

ಬೆಳಗಾವಿ, ಹುಬ್ಬಳ್ಳಿ: 2018ರಲ್ಲಿ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆದ ನಂತರ ಅಲ್ಲಿ ಅಧಿವೇಶನ ನಡೆದೇ ಇಲ್ಲ. ಇದೀಗ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಒತ್ತಡದಲ್ಲಿದೆ.

ಉತ್ತರ ಕರ್ನಾಟಕ ಭಾಗದ ಹಲವು ನಾಯಕರು ಮುಖ್ಯವಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮತ್ತು ಮುಖ್ಯ ಸಚೇತಕ ಮಹಂತೇಶ್ ಕವಟಗಿಮಠ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿ ವಿಧಾನ ಮಂಡಲ ಕಲಾಪ ನಡೆಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹೊರಟ್ಟಿಯವರು, ಅಸೆಂಬ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕವಟಗಿಮಠ ಅವರು ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ನೀಡಿರುವ ಸಲಹೆಯನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಕವಟಗಿಮಠ, ಬೆಳಗಾವಿಯಲ್ಲಿ ವಿಶೇಷವಾಗಿ ಕೋವಿಡ್ ಬಗ್ಗೆ ಕಲಾಪ ನಡೆಸಿ ಚರ್ಚೆ ನಡೆಸಬೇಕಾಗಿದೆ. ಇಂದು ಎದುರಿಸುತ್ತಿರುವ ಸಮಸ್ಯೆಯಾದ ಕೊರೋನಾ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸುವುದಲ್ಲದೆ ರಾಜ್ಯದಲ್ಲಿ ಆರೋಗ್ಯ ವಲಯವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಬೇಕು ಎಂದಿದ್ದಾರೆ.

ಆರೋಗ್ಯ ರಕ್ಷಣೆಯ ಕುರಿತು ಹಲವಾರು ಪ್ರಮುಖ ವಿಷಯಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ, ಸಾಂಕ್ರಾಮಿಕ ರೋಗವನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸುವುದು ಮತ್ತು ಎಲ್ಲಾ ಅಗತ್ಯವಿರುವವರಿಗೆ ಸಮಯೋಚಿತ ಚಿಕಿತ್ಸೆಯನ್ನು ನೀಡುವುದು ಹೇಗೆ ಎಂಬ ಬಗ್ಗೆ ಅಧಿವೇಶನದಲ್ಲಿ ನಾಯಕರು ಚರ್ಚೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಅತಿಥಿ ಉಪನ್ಯಾಸಕರ ಖಾಯಂಮಾತಿಗೆ ಒತ್ತಾಯ: ಕಳೆದ 15-20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂಗೊಳಿಸಬೇಕೆಂದು ಸಹ ಬಸವರಾಜ್ ಹೊರಟ್ಟಿ ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

SCROLL FOR NEXT