ರಾಜಕೀಯ

ಕಾಂಗ್ರೆಸ್ ಸೇರಲು ಇಚ್ಚಿಸುವವರು, ಬಿಟ್ಟು ಹೋದವರು ಸೇರಿದಂತೆ ಯಾರು ಬೇಕಾದರೂ ಅರ್ಜಿ ಹಾಕಬಹುದು: ಡಿ ಕೆ ಶಿವಕುಮಾರ್

Sumana Upadhyaya

ಬೆಂಗಳೂರು: ಯಾರಿಗೆ ನಮ್ಮ ಪಕ್ಷ, ಸಿದ್ಧಾಂತ, ನಾಯಕತ್ವ, ಕೆಲಸದ ಮೇಲೆ ನಂಬಿಕೆ, ಪ್ರೀತಿ ಇದೆಯೋ ಅಂತವರು ಕಾಂಗ್ರೆಸ್ ಪಕ್ಷ ಸೇರಿಕೊಳ್ಳಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರ ಮುಂದೆ ಮಾತನಾಡಿದ ಅವರು, ಯಾರ್ ಯಾರ್ ಕಾಂಗ್ರೆಸ್ ಬರಬೇಕು ಅಂತ ಬಯಸಿದ್ದಾರೆ ಅವರೆಲ್ಲರಿಗೂ ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ಮೊದಲು ಅರ್ಜಿ ಹಾಕಲಿ, ಆಮೇಲೆ ನಮ್ಮ ಸಮಿತಿ ಮುಂದಿಡುತ್ತೇವೆ, ಅವರು ತೀರ್ಮಾನ ತೆಗೆದುಕೊಳ್ಳಲಿ ಎಂದರು. 

ಈ ಹಿಂದೆ ಕಾಂಗ್ರೆಸ್ ಬಿಟ್ಟು ಹೋದ 17 ಮಂದಿ ನನ್ನ ಸಂಪರ್ಕ ಮಾಡಿಲ್ಲ. ಬೇರೆಯವರು ಸಂಪರ್ಕ ಮಾಡಿದ್ದಾರೆ. ಆ 17 ಮಂದಿ ಅರ್ಜಿ ಹಾಕಬಹುದಾ ಎಂದು ಕೇಳಿದಾಗ ಯಾರು ಬೇಕಾದ್ರು ಅರ್ಜಿ ಹಾಕಬಹುದು, ಆದರೆ ಅಂತಿಮವಾಗಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜಕೀಯದಲ್ಲಿ ಪಕ್ಷದಿಂದ ಬಿಟ್ಟು ಹೋಗುವುದು, ಮತ್ತೆ ಬರುವುದು ಸಾಮಾನ್ಯ ಎಂದರು.

ಕಾಂಗ್ರೆಸ್ ಪಕ್ಷದಿಂದ ಎಂಟಿಬಿ ನಾಗರಾಜ್ ಗೆ ಟಿಕೆಟ್ ಕೊಡಿಸಿದ್ದು ನಾನೇ, ಗೆದ್ದರು, ನನ್ನ ಎದೆಯಲ್ಲೇ ಕಾಂಗ್ರೆಸ್ ಪಕ್ಷ ಇದೆ ಅಂತಿದ್ದರು, ಕೊನೆಗೆ ಬಿಟ್ಟು ಹೋದರು, ರಾಜಕೀಯವೆಂಬುದು ಇಂದಿದ್ದ ಹಾಗೆ ನಾಳೆ ಇರುವುದಿಲ್ಲ, ಪಕ್ಷದಿಂದ ಬಿಟ್ಟು ಹೋಗುವುದು, ಹೊಸಬರು ಬರುವುದು ನಡೆಯುತ್ತಿರುತ್ತದೆ. ಸಂಪರ್ಕದಲ್ಲಿರುತ್ತಾರೆ, ಅರ್ಜಿ ಹಾಕುತ್ತಿರುತ್ತಾರೆ, ನಾಯಕರನ್ನು ಭೇಟಿ ಮಾಡುತ್ತಿರುತ್ತಾರೆ, ಅವುಗಳೆಲ್ಲಾ ನಡೆಯುತ್ತಿರುತ್ತದೆ ಎಂದರು.

ಕೇಂದ್ರ ಸಚಿವ ಸದಾನಂದ ಗೌಡರು ಮಾಧ್ಯಮಗಳಿಗೆ ಸಿಡಿ ಪ್ರಸಾರಕ್ಕೆ ತಡೆಯಾಜ್ಞೆ ತಂದಿರುವ ಬಗ್ಗೆ ಕೇಳಿದಾಗ ಬಿಜೆಪಿಯಲ್ಲಿ ಮತ್ತೊಂದು ಸಿಡಿ ಬರುತ್ತದೆಯೇ ಎಂದು ನೀವು ಮಾಧ್ಯಮದವರು ತನಿಖೆ ಮಾಡಿ, ನಾವು ಕೂಡ ಮಾಡುತ್ತೇವೆ, ಅವರು ಏಕೆ ತಡೆಯಾಜ್ಞೆ ತಂದಿದ್ದಾರೆ ಗೊತ್ತಿಲ್ಲ, ಅವರು ಕೇಂದ್ರ ಸಚಿವರು, ಅವರ ಬಗ್ಗೆ ನನಗೆ ಗೌರವವಿದೆ ಎಂದರು.

ಲಸಿಕೆಯಲ್ಲಿ ಮೋಸ: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿಚಾರದಲ್ಲಿ ವಂಚನೆ, ಮೋಸ, ಅವ್ಯವಹಾರ ನಡೆದಿದೆ. ಸಚಿವರು ಹೇಳುತ್ತಿರುವುದೆಲ್ಲ ಸುಳ್ಳು. ನನ್ನಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಯಿದ್ದು ಸದ್ಯದಲ್ಲಿಯೇ ಅದನ್ನು ಬಿಡುಗಡೆ ಮಾಡುತ್ತೇನೆ ಎಂದರು.

SCROLL FOR NEXT