ರಾಜಕೀಯ

ಬಿಎಸ್'ವೈರತ್ತ ವಾಲಿರುವ ಲಿಂಗಾಯತ ನಾಯಕರನ್ನು ಚುನಾವಣೆಗೂ ಮುನ್ನ ಕಾಂಗ್ರೆಸ್'ಗೆ ಕರೆತರಲು ಯತ್ನಿಸುತ್ತೇವೆ: ಎಂ.ಬಿ. ಪಾಟೀಲ್

Manjula VN

ಬೆಳಗಾವಿ: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರತ್ತ ವಾಲಿರುವ ಲಿಂಗಾಯತ ನಾಯಕರನ್ನು ಕಾಂಗ್ರೆಸ್'ಗೆ ಕರೆತರಲು ಪ್ರಯತ್ನ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ಮಾಸ್ ಲೀಟರ್ ಯಡಿಯೂರಪ್ಪ ಇದ್ದಾರೆ. ಇದರಿಂದಾಗಿ ಲಿಂಗಾಯತ ಮುಖಂಡರು ಅವರತ್ತ ವಾಲಿರುವುದು ಸಹಜ. 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆ ನಾಯಕರನ್ನು ಪ್ರಕಾಶ ಹುಕ್ಕೇರಿ, ಎ.ಬಿ.ಪಾಟೀಲ್ ಸೇರಿದಂತೆ ಇನ್ನಿತರ ಮುಖಂಡರ ಮುಂದಾಳತ್ವದಲ್ಲಿ ಕಾಂಗ್ರೆಸ್'ಗೆ ಕರೆತರಲು ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಲಿಂಗಾಯ ನಾಯಕರನ್ನು ಕಾಂಗ್ರೆಸ್ ನಲ್ಲಿ ಕಡೆಗಣನೆ ಮಾಡುತ್ತಿರುವ ವಿಚಾರವನ್ನು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್'ಗೆ ತಿಳಿಸುವ ಕಾರ್ಯ ಮಾಡಿದ್ದಾರೆ. ವೀರೇಂದ್ರ ಪಾಟೀಲ ಬಳಿಕ ಕಾಂಗ್ರೆಸ್'ಗೆ ಹಿನ್ನಡೆಯಾಗಿದೆ. ಹಿರಿಯ ಕಾಂಗ್ರೆಸ್ ಲಿಂಗಾಯತ ನಾಯಕರ ಸಲಹೆ ಪಡೆದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.

ಸ್ವಯಂ ಘೋಷಿತವಾಗಿ ನಾನೇ ಮುಖ್ಯಮಂತ್ರಿ. ನಾನೇ ಲಿಂಗಾಯತ ನಾಯಕ ಎಂದು ಹೇಳಲು ಸಾಧ್ಯವಿಲ್ಲ. ಅದನ್ನು ಜನ ಬಯಸಬೇಕು ಎಂದಿದ್ದಾರೆ.

ಕಾಂಗ್ರೆಸ್'ಗೆ ಮೊದಲು ಜನಾದೇಶ ಬರಬೇಕು. 150 ಕ್ಷೇತ್ರಗಳನ್ನು ಗೆಲ್ಲಬೇಕು. ಸಿದ್ದರಾಮಯ್ಯನವರ ಆಡಳಿತದಲ್ಲಿ ಉತ್ತಮವಾದ ಸ್ಥಿರವಾದ ಆಡಳಿತ ನೀಡಿದ್ದರು. ಆ ನಿಟ್ಟಿನಲ್ಲಿ ಪಕ್ಷ ಅಧಿಕಾರಕ್ಕೆ ಬರಲಿ ಮುಂದೆ ಸಿಎಂ ವಿಷಯ. ನಮ್ಮಲ್ಲಿ ಹೈಕಮಾಂಡ್, ಕಾಂಗ್ರೆಸ್ ಶಾಸಕರು ಹೇಳಬೇಕು. ಸ್ವಯಂ ಘೋಷಣೆ ಮಾಡಿಕೊಂಡರೆ ಸಾಲದು ಎಂದು ತೀಕ್ಷ್ಣವಾಗಿ ಮಾಧ್ಯದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಲಿಂಗಾಯ ಸ್ವತಂತ್ರ ಧರ್ಮದ ಹೋರಾಟ 12ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು, ಬಳಿಕ 1938, 1940, 1942ರಲ್ಲಿ ಎಸ್.ವಡೆಯರ ಸೇರಿದಂತೆ ಹಲವಾರು ನಾಯಕರು ಹೋರಾಟ ನಡೆಸಿದ್ದರು. ಈ ವಿಚಾರವಾಗಿ ನಾನು ಮಾತನಾಡಲು ಬೆಳಗಾವಿಗೆ ಬಂದಿಲ್ಲ. ಅಂತರಾಷ್ಟ್ರೀಯ ಬಸವಣ್ಣನವರ ಗ್ರಂಥಾಲಯವನ್ನು ವಿಜಯಪುರ ಅಥವಾ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಬೇಕೆಂಬುದರ ಕುರಿತು ಶ್ರೀಗಳೊಂದಿಗೆ ಚರ್ಚೆ ನಡೆಸಲು ಬಂದಿರುವ ಎಂದರು. 

SCROLL FOR NEXT