ರಾಜಕೀಯ

ಬಿಜೆಪಿ, ಜೆಡಿಎಸ್'ನ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ಧರಿದ್ದಾರೆ: ಪರಮೇಶ್ವರ್

Manjula VN

ತುಮಕೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದೇ ಆದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಹಲವು ನಾಯಕರು ಕಾಂಗ್ರೆಸ್'ಗೆ ಸೇರ್ಪಡೆಗೊಳ್ಳಲು ಸಿದ್ಧರಿದ್ದಾರೆಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭಾನುವಾರ ಹೇಳಿದ್ದಾರೆ. 

ತುರುವೇಕೆರೆಯಲ್ಲಿ ಮಾತನಾಡಿದ ಪರಮೇಶ್ವರ್ ಅವರು, ಬಿಜೆಪಿ ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾವೇನು ಪಕ್ಷವನ್ನು ಬಲಪಡಿಸುವುದು, ಅಧಿಕಾರಕ್ಕೆ ಬರುವುದು ಬೇಡವೇ ಎಂದು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವವರ ಕುರಿತು ಪರಿಶೀಲನೆ ನಡೆಸಲು ಈಗಾಗಲೇ ಕಾಂಗ್ರೆಸ್ ನಾಯಕ ಅಲ್ಲಮ್ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿದ್ದರ ಕುರಿತು ಮಾತನಾಡಿರುವ ಅವರು, ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೇ ಏನೋ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ. ಬಿಎಸ್‌ವೈ ದೆಹಲಿ ಭೇಟಿ ವೇಳೆ ಹೈಕಮಾಂಡ್ ಹಲವು ಮಹತ್ವದ ಸೂಚನೆಗಳನ್ನ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ದಿಢೀರ್ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ ಎಂದು ಹೇಳಿದ್ದಾರೆ. 

ರಾಜ್ಯ ಬಿಜೆಪಿಯಲ್ಲಿ ‌ಆಂತರಿಕ ಸಮಸ್ಯೆ ಸ್ಪೋಟಗೊಂಡಿದೆ. ಮುಖ್ಯಮಂತ್ರಿ ರಾಜೀನಾಮೆ  ಕೊಡಬೇಕು ಎಂದು ಅವರ ಪಕ್ಷದವರೇ ಪಟ್ಟು ಹಿಡಿದಿದ್ದಾರೆ. ಬಿಜೆಪಿ ಸರ್ಕಾರ ನೀರಿನ ಮೇಲಿನ ಗುಳ್ಳೆಯಂತೆ. ಇದು ಯಾವಾಗ ಬೇಕಾದರೂ ಒಡೆದು ಹೋಗಬಹುದು ಎಂದು ಬಾಂಬ್ ಸಿಡಿಸಿದ್ದಾರೆ. 

SCROLL FOR NEXT