ರಾಜಕೀಯ

ರಾಜ್ಯದಲ್ಲಿ ಸಿಎಂ ಬದಲಾವಣೆಯಾದರೆ ಕಾಂಗ್ರೆಸ್ಸಿಗೆ ಲಾಭವಿಲ್ಲ: ಸತೀಶ್ ಜಾರಕಿಹೊಳಿ

Manjula VN

ಬೆಳಗಾವಿ: ಮುಖ್ಯಮಂತ್ರಿ ಹುದ್ದೆಯಿಂದ ಒಬ್ಬರು ಕೆಳಗಿಳಿಯುತ್ತಾರೆ, ಮತ್ತೊಬ್ಬರು ಆ ಹುದ್ದೆಗೇರುತ್ತಾರೆ. ಆದರೆ, ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯುವವರ ಬಾಯಿಂದ ಯಾವ ಸಂದೇಶ ಹೊರ ಬರುತ್ತದೆ ಎಂದು ಕಾಯುತ್ತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಮಾರ್ಮಿಕವಾಗಿ ಹೇಳಿದ್ದಾರೆ. 

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಯಿಂದ ಕಾಂಗ್ರೆಸ್ಸಿನವರಿಗೆ ಯಾವುದೇ ಲಾಭವೂ ಇಲ್ಲ. ಸಿಎಂ ಬದಲಾದರೆ, ಸರ್ಕಾರ ಅವರದ್ದೇ ಇರುತ್ತದೆ. ಅದನ್ನು ಬಿಟ್ಟು ಬೇರೆ ಕೆಲಸ ಮಾಡಬೇಕಿದೆ. ನಾವು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ ಎಂದು ಹೇಳಿದ್ದಾರೆ. 

ರಾಜಕೀಯದಲ್ಲಿ ಹೀಗೆಯೇ ಎಂದು ಹೇಳಲು ಆಗುವುದಿಲ್ಲ. ಮಧ್ಯಂತರ ಚುನಾವಣೆ ಬಂದರೂ ಬರಬಹುದು. ಹೀಗಾಗಿ ಈಗಿನಿಂದಲೇ ಕಾಂಗ್ರೆಸ್ಸಿನಿಂದ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

ಜಿಲ್ಲೆ ಸೇರಿ ಮುಂಬೈ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನಾವು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ರಾಜಕೀಯ ಎಂದ ಮೇಲೆ ಜಾತಿ ಲೆಕ್ಕಾಚಾರ ಇದ್ದೇ ಇರುತ್ತದೆ. ಆಯಾ ಜಾತಿ ಮುಖಂಡರು ಕಾಂಗ್ರೆಸ್'ನಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ನಿರತರಾಗಿದ್ದಾರೆಂದಿದ್ದಾರೆ. 

SCROLL FOR NEXT