ರಾಜಕೀಯ

ಸಿಎಂ ಬದಲಾವಣೆ ಚರ್ಚೆ: ಬಿಎಸ್ ಯಡಿಯೂರಪ್ಪ ಪುತ್ರ ರಾಘವೇಂದ್ರ ಹೇಳಿದ್ದೇನು?

Shilpa D

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಿಎಂ ಯಡಿಯೂರಪ್ಪ ಪುತ್ರ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೊನೆಗೂ ತುಟಿ ಬಿಚ್ಚಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಸುದ್ದಿ ಬರೀ ಊಹಾಪೋಹ. ಯಡಿಯೂರಪ್ಪ ಅವರು ತಳಮಟ್ಟದಿಂದ ಪಕ್ಷ ಕಟ್ಟಿದ್ದಾರೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೆಲವರ ಹೇಳಿಕೆಗಳಿಂದ ಪಕ್ಷಕ್ಕೆ ನಷ್ಟವಾಗುತ್ತಿದೆ. ಪಕ್ಷದ ವರಿಷ್ಠರು ಎಲ್ಲವನ್ನೂ ಸರಿ ಮಾಡುವರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಎಲ್ಲ ವರ್ಗದ ಮಠಾಧೀಶರೂ ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದು ಲಾಭಿಯಲ್ಲ. ಅವರ ಭಾವನೆಗಳ ಅಭಿವ್ಯಕ್ತಿ ಎಂದು ಸಮರ್ಥಿಸಿಕೊಂಡರು.

ಕೆಲವು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಯಡಿಯೂರಪ್ಪ ಅವರ ಮಕ್ಕಳಿಗೋಸ್ಕರ ಹೈಕಮಾಂಡ್ ಬಳಿ ಕಂಡಿಷನ್ ಹಾಕಿದ್ದಾರೆ ಎಂದು ತೋರಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ ಲಕ್ಷಗಟ್ಟಲೆ ಕಾರ್ಯಕರ್ತರನ್ನು ಸಂಘಟನೆಗೆ ಕೊಡುಗೆಯಾಗಿ ನೀಡಿದ್ದಾರೆ. ಅನೇಕ ನಾಯಕರನ್ನು ಬೆಳೆಸಿದ್ದಾರೆ. ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರು ಎಲ್ಲಿಯೂ ಸೀಮಿತವಾಗಿ ಅವರ ಮಕ್ಕಳಿಗಾಗಿ, ಕುಟುಂಬಕ್ಕಾಗಿ ಚಿಂತನೆ ಮಾಡುವ ಸಂಕುಚಿತ ನಾಯಕರಲ್ಲ ಎಂದರು.

ವಿಜಯೇಂದ್ರರನ್ನು ಮಂತ್ರಿ ಮಾಡಲು, ರಾಘವೇಂದ್ರನಿಗೆ ಸ್ಥಾನ ಕೊಡಿಸಲು ಡಿಮ್ಯಾಂಡ್ ಮಾಡಿದ್ದಾರೆ ಎಂಬುದು ಸುಳ್ಳು. ಪಕ್ಷದಲ್ಲಿ ಇಂತಹ ಯಾವುದೇ ಚರ್ಚೆ ಸಹ ನಡೆದಿಲ್ಲ. ಮುಂದಿನ ದಿನಗಳಲ್ಲಿಯೂ ಒಳ್ಳೆಯ ರೀತಿಯ ಆಡಳಿತ ನೀಡಲಿದ್ದಾರೆ. ಯಡಿಯೂರಪ್ಪ ಅವರು ಸ್ವಾಮೀಜಿಗಳ ಆಶೀರ್ವಾದ, ಸಂಘಟನೆಯ ಆಶೀರ್ವಾದದಿಂದ ಬೆಳೆದಿದ್ದಾರೆ. ಹೀಗಾಗಿ ಅಭಿವೃದ್ಧಿ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಅವರ ಮನೆಗೆ ಮಠಾಧೀಶರು ಭೇಟಿ ನೀಡುತ್ತಾರೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ತಿಳಿಸಿದರು.

SCROLL FOR NEXT